Friday, November 28, 2025

ಪರಪ್ಪನ ಅಗ್ರಹಾರ ಜೈಲಾ? ಮದ್ಯದ ಫ್ಯಾಕ್ಟರಿಯಾ? ಕೈದಿಗಳ ‘ಲಿಕ್ಕರ್’ ದಂಧೆ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅಪರಾಧಿಗಳ ಮನಃಪರಿವರ್ತನೆ ಮತ್ತು ಸುಧಾರಣಾ ಕೇಂದ್ರವಾಗಬೇಕಿತ್ತು. ಆದರೆ, ಇತ್ತೀಚಿನ ಘಟನೆಗಳು ಮತ್ತು ಹೊರಬಿದ್ದ ಸ್ಫೋಟಕ ಮಾಹಿತಿಗಳ ಪ್ರಕಾರ, ಈ ಜೈಲು ಈಗ ಕ್ರಿಮಿನಲ್‌ಗಳ ‘ಮೋಜು ಮಸ್ತಿ’ ತಾಣವಾಗಿ ಮಾರ್ಪಟ್ಟಿದೆ. ಜೈಲಿನೊಳಗೆ ಜನ್ಮದಿನಾಚರಣೆ, ಗುಂಡು-ತುಂಡಿನ ಪಾರ್ಟಿ ಹಾಗೂ ಉಗ್ರರ ಬಳಿ ಮೊಬೈಲ್ ಇರುವ ವಿಡಿಯೋಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಎಲ್ಲದರ ನಡುವೆ, ಪರಪ್ಪನ ಅಗ್ರಹಾರ ನಿಜಕ್ಕೂ ಜೈಲಾ ಅಥವಾ ಮದ್ಯದ ಫ್ಯಾಕ್ಟರಿಯಾ ಎಂಬ ಅನುಮಾನ ಮೂಡಿಸುವ ಮತ್ತೊಂದು ಆಘಾತಕಾರಿ ಸತ್ಯ ಹೊರಬಿದ್ದಿದೆ.

ಜೈಲಲ್ಲೇ ಲಿಕ್ಕರ್ ತಯಾರಿಕೆ: 7ನೇ ಬ್ಯಾರಕ್‌ನಲ್ಲೇ ‘ಮದ್ಯದ ಫ್ಯಾಕ್ಟರಿ’

ಅಪರಾಧಿಗಳನ್ನು ಇಲ್ಲಿ ಶಿಕ್ಷಿಸಲಾಗುತ್ತಿದೆ ಎಂಬ ನಂಬಿಕೆ ಸಂಪೂರ್ಣ ಸುಳ್ಳು ಎಂಬಂತೆ, ಕ್ರಿಮಿನಲ್‌ಗಳು ತಮ್ಮದೇ ಪ್ರತ್ಯೇಕ ಲೋಕದಲ್ಲಿ ಎಣ್ಣೆ ಪಾರ್ಟಿಗಳನ್ನು ಆಯೋಜಿಸುತ್ತಿರುವುದು ಬಯಲಾಗಿದೆ. ಇತ್ತೀಚೆಗೆ ವೈರಲ್ ಆದ ಎಣ್ಣೆ ಪಾರ್ಟಿಯ ವಿಡಿಯೋದ ತನಿಖೆಗೆ ಇಳಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಹೊರಗಿನಿಂದ ಮದ್ಯ ಸರಬರಾಜು ಆಗಿಲ್ಲ ಎಂಬುದು ಖಚಿತವಾದ ನಂತರ, ಜೈಲಿನ ಒಳಗಡೆಯೇ ಮದ್ಯ ತಯಾರಾಗುತ್ತಿದೆಯೇ ಎಂಬ ಅನುಮಾನದಿಂದ ತನಿಖೆ ಮುಂದುವರೆದಿದೆ.

ಕಳ್ಳಬಟ್ಟಿ ತಯಾರಿಕೆ ಪ್ರಕರಣಗಳಲ್ಲಿ ಜೈಲು ಸೇರಿರುವ ಕೆಲವು ಕೈದಿಗಳು ಈ ಅಕ್ರಮ ದಂಧೆಯ ನೇತೃತ್ವ ವಹಿಸಿರುವುದು ಬೆಳಕಿಗೆ ಬಂದಿದೆ. ಜೈಲಿನಲ್ಲಿ ಸಿಗುವ ಸಾಮಾನ್ಯ ಸಾಮಗ್ರಿಗಳನ್ನು ಬಳಸಿಯೇ ‘ಲಿಕ್ಕರ್’ ತಯಾರಿಸಲಾಗುತ್ತಿತ್ತು.

ಈ ಅಕ್ರಮ ತಯಾರಿಕೆಗೆ ಪ್ರತ್ಯೇಕವಾಗಿ ಎರಡು ತಂಡಗಳು ಕಾರ್ಯ ನಿರ್ವಹಿಸುತ್ತಿದ್ದವು. ಕೊಳೆತ ಸೇಬು, ದ್ರಾಕ್ಷಿ ಸೇರಿದಂತೆ ರಾಶಿ ರಾಶಿ ಹಣ್ಣುಗಳು, ಚಕ್ಕೆ, ಗೋಧಿ ಮತ್ತು ಸಕ್ಕರೆಯನ್ನು ಜೈಲಿನ ಬ್ಯಾರಕ್‌ನಲ್ಲಿ ಸಂಗ್ರಹಿಸುವುದು ಒಂದು ತಂಡದ ಕೆಲಸವಾಗಿತ್ತು. ಮತ್ತೊಂದು ತಂಡವು ಜೈಲಿನ ಬೇಕರಿಯಲ್ಲಿ ಬಳಸುವ ‘ಈಸ್ಟ್’ ಅನ್ನು ತರುತ್ತಿತ್ತು.

ತಯಾರಿಕಾ ವಿಧಾನ: ಈ ಎಲ್ಲ ವಸ್ತುಗಳನ್ನು ಮಿಶ್ರಣ ಮಾಡಿ ಪಾತ್ರೆಯಲ್ಲಿ ಹಾಕಿ ಜೈಲಿನ ಮೂಲೆಯಲ್ಲಿ ತಿಂಗಳುಗಟ್ಟಲೆ ಇಡಲಾಗುತ್ತಿತ್ತು. ಪಾರ್ಟಿ ಮಾಡುವಾಗ ಈ ಮಿಶ್ರಣವನ್ನು ಚೆನ್ನಾಗಿ ಹಿಂಡಿ ಬಾಟಲಿಗಳಿಗೆ ತುಂಬಿಸಿಕೊಳ್ಳಲಾಗುತ್ತಿತ್ತು. ಡಿಸೆಂಬರ್ 31ರ ಪಾರ್ಟಿಗೂ ಇದೇ ರೀತಿ ಮದ್ಯ ತಯಾರಿಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ.

ವೈರಲ್ ವಿಡಿಯೋಗಳ ಹಿಂದಿನ 3 ಮುಖ್ಯ ಕಾರಣಗಳು

ಜೈಲಿನಲ್ಲಿ ಮದ್ಯ ತಯಾರಿಸಿ ಪಾರ್ಟಿ ಮಾಡುವುದಲ್ಲದೆ, ಕೈದಿಗಳು ಉದ್ದೇಶಪೂರ್ವಕವಾಗಿಯೇ ಇದರ ವಿಡಿಯೋಗಳನ್ನು ಮಾಡಿ ವೈರಲ್ ಮಾಡುತ್ತಿದ್ದರು. ಇದರ ಹಿಂದೆ ಮೂರು ಪ್ರಮುಖ ಕಾರಣಗಳಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ:

ಮನೆಯವರಿಗೆ ಭರವಸೆ: ವಿಡಿಯೋಗಳನ್ನು ಮನೆಯವರಿಗೆ ಕಳುಹಿಸಿ ತಾವು ಜೈಲಿನಲ್ಲಿ ಸುಖವಾಗಿದ್ದೇವೆ, ಯಾವುದೇ ತೊಂದರೆ ಇಲ್ಲ ಎಂದು ತೋರಿಸಿಕೊಳ್ಳುವುದು.

ಗುಂಡಾಗಳಿಗೆ ಬಿಲ್ಡಪ್ ಮತ್ತು ಹಫ್ತಾ ವಸೂಲಿ: ತಮ್ಮ ಗ್ಯಾಂಗ್‌ ಸದಸ್ಯರಿಗೆ ವಿಡಿಯೋ ಕಳುಹಿಸಿ ‘ಬಿಲ್ಡಪ್’ ತೆಗೆದುಕೊಳ್ಳುವುದು ಮತ್ತು ಹೊರಗಡೆ ಸುಲಭವಾಗಿ ಹಫ್ತಾ ವಸೂಲಿ ಮಾಡುವುದು.

ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್: ಜೈಲಿನ ಅಧಿಕಾರಿಗಳಿಗೆ ಈ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುವುದು ಮತ್ತು ತಮಗೆ ಬೇಕಾದ ರೀತಿಯಲ್ಲಿ ಜೈಲಿನಲ್ಲಿ ಆಟ ಆಡುವುದು.

ದಕ್ಷ ಅಧಿಕಾರಿ ದಯಾನಂದರಂತಹವರು ಬಂಧೀಖಾನೆ ಮತ್ತು ಸುಧಾರಣಾ ಇಲಾಖೆಯ ಎಡಿಜಿಪಿಯಾಗಿದ್ದರೂ, ಜೈಲಿನ ಆಂತರಿಕ ವ್ಯವಸ್ಥೆಯಲ್ಲಿನ ಈ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದರೂ, ಪರಪ್ಪನ ಅಗ್ರಹಾರದಲ್ಲಿ ಈ ಅಕ್ರಮ ದಂಧೆಗಳು ನಿರಂತರವಾಗಿ ನಡೆಯುತ್ತಿರುವುದು ಆಡಳಿತಕ್ಕೆ ತೀವ್ರ ಮುಜುಗರ ತಂದಿದೆ. ಜೈಲಿನೊಳಗೇ ಮದ್ಯದ ಫ್ಯಾಕ್ಟರಿ ತೆರೆದಿರುವುದು ನಿಜಕ್ಕೂ ತಲೆ ತಗ್ಗಿಸುವ ಸಂಗತಿಯಾಗಿದ್ದು, ಇದಕ್ಕೆ ತುರ್ತಾಗಿ ಬ್ರೇಕ್ ಬೀಳುವ ಅಗತ್ಯವಿದೆ.

error: Content is protected !!