Friday, November 28, 2025

2,000 ಅಪಾರ್ಟ್‌ಮೆಂಟ್ಸ್‌ ಇರುವ ಕಟ್ಟಡದಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 44ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡ ಜಗತ್ತನ್ನೇ ಬೆಚ್ಚಿಬೀಳಿಸಿದೆ. ವಾಂಗ್ ಫುಕ್ ಕೋರ್ಟ್ ಎಂಬ 8 ಬಹುಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಲಿಯಾಗಿರುವವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

ಇನ್ನೂ ಹಲವರು ಒಳಗೇ ಸಿಲುಕಿರುವ ಪರಿಣಾಮ ಸಾವು-ನೋವು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ 900ಕ್ಕೂ ಹೆಚ್ಚು ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನ ಹೊಂದಿರುವ ಈ ಬೃಹತ್ ವಸತಿ ಸಮುಚ್ಚಯದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಇದಕ್ಕಾಗಿ ಕಟ್ಟಡಗಳ ಹೊರಭಾಗದಲ್ಲಿ ಬಿದಿರಿನ ಅಟ್ಟಣಿಗೆ ರಚಿಸಲಾಗಿತ್ತು. ಈ ಬಿದಿರಿನ ರಚನೆಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಲವಾದ ಗಾಳಿ ಮತ್ತು ಉರಿಯುತ್ತಿದ್ದ ಅವಶೇಷಗಳು ತೂರಿಬಂದ ಪರಿಣಾಮ, ಪಕ್ಕದ 7 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ.

ಬೆಂಕಿಯ ತೀವ್ರತೆಗೆ ಕಿಟಕಿಗಳ ಮೂಲಕ ಜ್ವಾಲೆಗಳು ಹೊರಬರುತ್ತಿದ್ದವು ಮತ್ತು ಬಿದಿರು ಸಿಡಿಯುವ ಶಬ್ದಗಳು ಜೋರಾಗಿ ಕೇಳಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಘಟನಾ ಸ್ಥಳದಲ್ಲೇ 9 ಜನರನ್ನು ಮೃತರೆಂದು ಘೋಷಿಸಲಾದರೆ, ಆಸ್ಪತ್ರೆಗೆ ಸಾಗಿಸಿದ ನಂತರ ಉಳಿದವರು ಸಾವನ್ನಪ್ಪಿದ್ದಾರೆ. ದುರದೃಷ್ಟವಶಾತ್, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಓರ್ವ ಅಗ್ನಿಶಾಮಕ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನೂ ನೂರಾರು ಜನರು ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ದೊಡ್ಡ ಮಟ್ಟಕ್ಕೆ ಏರಿಕೆಯಾಗುವ ಆತಂಕವಿದೆ. ಕಟ್ಟಡಗಳ ಒಳಗೆ ಉಷ್ಣಾಂಶ ವಿಪರೀತವಾಗಿರುವುದರಿಂದ ಸಹಾಯ ಕೋರಿದ ಕೆಲವು ಮಹಡಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಗ್ನಿಶಾಮಕ ದಳದ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್ ತಿಳಿಸಿದ್ದಾರೆ.

error: Content is protected !!