ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ವಾತಾವರಣ ಮಲೆನಾಡಂತೆ ಆಗಿದೆ. ಮಂಜಿನಿಂದ ತುಂಬಿರುವ ನಗರಿಯಲ್ಲಿ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗೋದೇ ಒಂದು ಸವಾಲಾಗಿ ಪರಿಣಮಿಸಿದೆ. ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ ಸ್ಕೂಲ್ಗೆ ಕಳಿಸೋ ಅಷ್ಟರಲ್ಲಿ ಎಲ್ಲರೂ ಹೈರಾಣಾಗ್ತಿದ್ದಾರೆ.
ಜನವರಿ ವೇಳೆಗೆ ರಾಜ್ಯವ್ಯಾಪಿ ಚಳಿ ಅಬ್ಬರ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸದ್ಯ ನವೆಂಬರ್ ಅಂತ್ಯದಲ್ಲೇ ಚಳಿ ಹೆಚ್ಚಾಗಿದೆ. ರಸ್ತೆ, ಕಟ್ಟಡಗಳು ಕಾಣದಂತೆ ದಟ್ಟ ಮಂಜು ಆವರಿಸಿದ್ದು, ಆಚೆ ಓಡಾಡುವವರು ಚಳಿಯಲ್ಲಿ ನಡುಗುವಂತೆ ಮಾಡಿದೆ. ಕನಿಷ್ಠ ಉಷ್ಣಾಂಶ ಇಳಿಕೆ ಹಿನ್ನೆಲೆ ದಟ್ಟ ಮಂಜು, ಚಳಿ ಹೆಚ್ಚಾಗಿದೆ. ನಗರದ ಬಹುತೇಕ ಕಡೆ ಇದೇ ವಾತವರಣ ಇದೆ.
ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಚಳಿಯ ಕಾಟ ಹೆಚ್ಚಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಜೊತೆಗೆ ಬೆಂಗಳೂರಿಗೂ ಕಳೆದ ಬಾರಿಗಿಂತ ಹೆಚ್ಚು ಚಳಿ ಕಾಡುವ ಸಾಧ್ಯತೆ ಇದೆಯಂತೆ. ರಾಜ್ಯದ ಹಲವೆಡೆ ನವೆಂಬರ್ ಮಧ್ಯದಲ್ಲೇ ಚಳಿ ಕಾಟ ಜೋರಾಗಿದೆ. ವಾತವರಣ ಬದಲಾದಂತೆ ಮತ್ತು ಈ ಬಾರಿ ಮಳೆ ಕೂಡ ಉತ್ತಮವಾಗಿರುವ ಕಾರಣ ಚಳಿಯ ಹೆಚ್ಚಳವಾಗಲಿದೆ ಅಂತಿದೆ ಹವಾಮಾನ ಇಲಾಖೆ.
ರಾಜ್ಯದ ಉತ್ತರ ಒಳನಾಡಿನ ರಾಯಚೂರು, ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿವರೆಗೆ ಇಳಿಕೆ ಸಾಧ್ಯತೆ ಇದೆ ಎನ್ನಲಾಗಿದೆ. ಸಾಮಾನ್ಯವಾಗಿ ಈ ಭಾಗಗಳಲ್ಲಿ ರಾಜ್ಯದ ಉಳಿದ ಭಾಗಕ್ಕಿಂತ ಸ್ವಲ್ಪ ಹೆಚ್ಚೇ ಚಳಿ ಪ್ರತಿವರ್ಷವು ಕಾಡುತ್ತದೆ. ಈ ಬಾರಿ ಅದಕ್ಕೂ ಹೆಚ್ಚಾಗಿ ಕಾಟ ನೀಡಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಶೀತಗಾಳಿಯ ಎಫೆಕ್ಟ್ ಕೂಡ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಎಚ್ಚರಿಕೆ ನೀಡಿದೆ.
ಮಲೆನಾಡಂತೆ ಕಾಣುತ್ತಿರುವ ಸಿಲಿಕಾನ್ ಸಿಟಿ, ಬೆಳಗ್ಗೆ ಏಳೋದೇ ಸವಾಲು!

