February 20, 2026
Friday, February 20, 2026
spot_img

‘ನಮ್ಮಪ್ಪನೇ ಸಿಎಂ’: ಅಧಿಕಾರ ಬದಲಾವಣೆ ಚರ್ಚೆಗೆ ಯತೀಂದ್ರ ಫುಲ್ ಸ್ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಇನ್ನೂ ಎರಡೂವರೆ ವರ್ಷಗಳ ಕಾಲ ನಮ್ಮ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಯಾವುದೇ ಆರೋಪಗಳಿಲ್ಲ ಮತ್ತು ಅವರನ್ನು ಕೆಳಗಿಳಿಸಲು ಯಾವುದೇ ಕಾರಣಗಳಿಲ್ಲ. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯೇ ಅನಗತ್ಯ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲವರು ಬೇಕಂತಲೇ ಈ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ, ಹೈಕಮಾಂಡ್‌ನಿಂದ ಯಾವುದೇ ಬದಲಾವಣೆಯ ಸೂಚನೆಗಳಿಲ್ಲ, ಮತ್ತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಅಧಿಕಾರ ಹಂಚಿಕೆ ಸೂತ್ರವೇ ಇಲ್ಲ!

ಅಧಿಕಾರ ಹಂಚಿಕೆ ಕುರಿತಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಮಾತನಾಡಿದ ಯತೀಂದ್ರ, “ನನಗೆ ತಿಳಿದಿರುವ ಮಾಹಿತಿ ಪ್ರಕಾರ, ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದರು. “ನಮ್ಮ ತಂದೆಯವರಾಗಲಿ ಅಥವಾ ಹಿರಿಯ ಸಚಿವರಾಗಲಿ ಈ ಬಗ್ಗೆ ಎಂದಿಗೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆಯೇ ನಡೆದಿಲ್ಲ ಎಂದು ಅರ್ಥವಲ್ಲವೇ?” ಎಂದು ಪ್ರಶ್ನಿಸಿದರು.

ಶಾಸಕರ ಬೆಂಬಲದ ಅಂಕಿ-ಸಂಖ್ಯೆಗಳ ಬಗ್ಗೆ ಚರ್ಚಿಸುವುದು ಬೇಡ. ಅದು ಪಕ್ಷದ ಆಂತರಿಕ ವಿಚಾರ. ಎಲ್ಲಾ ಶಾಸಕರ ಸಂಪೂರ್ಣ ಬೆಂಬಲ ನಮ್ಮ ತಂದೆಗೆ ಇದೆ ಎಂದು ಅವರು ಪುನರುಚ್ಚರಿಸಿದರು.

ಸ್ವಾಮೀಜಿಯವರಿಗೆ ತಿರುಗೇಟು

ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದ ಆದಿಚುಂಚನಗಿರಿ ಮಠದ ಸ್ವಾಮೀಜಿಯವರ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ಅವರು ಖಡಕ್ ತಿರುಗೇಟು ನೀಡಿದರು. “ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎಂಬುದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಠಾಧೀಶರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !