ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ, ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಹತ್ಯೆಗೀಡಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈ ಗಾಳಿಸುದ್ದಿಗೆ ಅಫ್ಘಾನಿಸ್ತಾನದ ಕೆಲವು ಮಾಧ್ಯಮಗಳ ವರದಿಗಳು ಸಹ ಇಂಬು ನೀಡಿದ್ದವು.
ಆದರೆ, ಈ ಕುರಿತು ತಕ್ಷಣವೇ ಪ್ರತಿಕ್ರಿಯಿಸಿದ ಪಾಕಿಸ್ತಾನದ ಜೈಲು ಅಧಿಕಾರಿಗಳು, ಈ ವರದಿಗಳು ‘ಶುದ್ಧ ಸುಳ್ಳು’ ಎಂದು ಸ್ಪಷ್ಟಪಡಿಸಿದ್ದಾರೆ. ಅಡಿಯಾಲಾ ಜೈಲು ಆಡಳಿತವು, “ಇಮ್ರಾನ್ ಖಾನ್ ಅವರು ಜೈಲಿನಲ್ಲಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಮತ್ತು ಉತ್ತಮ ಆರೋಗ್ಯ ಸ್ಥಿತಿಯಲ್ಲಿದ್ದಾರೆ. ಅವರ ಸುರಕ್ಷತೆಗೆ ಧಕ್ಕೆಯಾಗುವಂತಹ ಯಾವುದೇ ಘಟನೆ ನಡೆದಿಲ್ಲ. ಅವರಿಗೆ ಸರಿಯಾದ ಆರೈಕೆ ಮತ್ತು ಭದ್ರತೆಯನ್ನು ಒದಗಿಸಲಾಗುತ್ತಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪಿಟಿಐನಿಂದ ಕುಟುಂಬ ಭೇಟಿಗೆ ಮನವಿ
ಜೈಲು ಅಧಿಕಾರಿಗಳು ಇಮ್ರಾನ್ ಖಾನ್ ಅವರ ಸುರಕ್ಷತೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ, ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಆತಂಕ ವ್ಯಕ್ತಪಡಿಸಿದೆ.
ಪಿಟಿಐ ನಾಯಕರು, ಇಮ್ರಾನ್ ಖಾನ್ ಅವರ ಕುಟುಂಬ ಸದಸ್ಯರಿಗೆ ತಕ್ಷಣವೇ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, “ಖಾನ್ ಅವರ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಪರಮ ಜವಾಬ್ದಾರಿಯಾಗಿದೆ. ಅವರ ಆರೋಗ್ಯಕ್ಕೆ ಸಣ್ಣ ವ್ಯತ್ಯಾಸವಾದರೂ ಜನ ಅದನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದೆ. ವದಂತಿಗಳ ಹಿನ್ನೆಲೆಯಲ್ಲಿ, ಜನರ ಆತಂಕ ನಿವಾರಿಸಲು ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವಂತೆಯೂ ಪಿಟಿಐ ಸರ್ಕಾರವನ್ನು ಒತ್ತಾಯಿಸಿದೆ.

