Friday, November 28, 2025

ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿಗೆ ಹೆರಿಗೆ: 6 ಜನರ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳ ಜಿಲ್ಲೆಯ ವಸತಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಂಡುಮಗುವಿಗೆ ಜನ್ಮ ನೀಡಿರುವ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಇದೀಗ ಒಟ್ಟು ಆರು ಜನರ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವಸತಿ ನಿಲಯದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

FIR ದಾಖಲಾದವರಾರು?

ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಹನುಮಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ್ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಕುಕನೂರು ತಂಡದ ವೈದ್ಯರಾದ ಡಾ. ಭರತೇಶ್ ಮತ್ತು ಡಾ. ಸಬೀಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ವೈದ್ಯರ ವಿರುದ್ಧವೂ FIR ಏಕೆ?

ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು RBSK ಕಾರ್ಯಕ್ರಮದಡಿ ಪ್ರತಿ ತಿಂಗಳು ವಸತಿ ನಿಲಯದಲ್ಲಿ ತಪಾಸಣೆ ನಡೆಸಲಾಗುತ್ತದೆ. ಆದರೆ, ಕಳೆದ ಎರಡು ತಿಂಗಳ ಹಿಂದೆ ವಿದ್ಯಾರ್ಥಿನಿಯ ತಪಾಸಣೆ ನಡೆಸಿದಾಗಲೂ ಆಕೆ ಗರ್ಭಿಣಿಯಾಗಿರುವುದು ವೈದ್ಯರಿಗೆ ಪತ್ತೆಯಾಗಿಲ್ಲ. ಈ ಗಂಭೀರ ಕರ್ತವ್ಯಲೋಪದ ಕಾರಣದಿಂದ ಇಬ್ಬರು ವೈದ್ಯಾಧಿಕಾರಿಗಳ ಮೇಲೆಯೂ ಕೇಸ್‌ ದಾಖಲಾಗಿದೆ.

ಸಿಬ್ಬಂದಿ ಅಮಾನತು:

ಇನ್ನು, ಘಟನೆಯ ಬಳಿಕ ವಸತಿ ನಿಲಯದ ಮೇಲ್ವಿಚಾರಕಿ, ಅಡುಗೆ ಸಹಾಯಕರಾದ ಪಾರ್ವತಿ ಮತ್ತು ಪ್ರಿಯಾಂಕಾ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಘಟನೆ ವಿವರ:

ಬುಧವಾರ (ನ.26) ಬೆಳಿಗ್ಗೆ 5.30ರ ಸುಮಾರಿಗೆ ಕುಕನೂರು ವಸತಿ ನಿಲಯದಲ್ಲಿ ವಿದ್ಯಾರ್ಥಿನಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆ ಶೌಚಾಲಯಕ್ಕೆ ತೆರಳಿದಾಗ ಅಲ್ಲೇ ಗಂಡುಮಗುವಿಗೆ ಜನ್ಮ ನೀಡಿದ್ದಳು.

ಬಳಿಕ ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ಆರೋಪಿಯು ನನಗೆ ಎಂಟನೇ ತರಗತಿಯಿಂದಲೇ ಪರಿಚಯವಿದ್ದನು. ಅವನು ನನ್ನನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿ, ಮದುವೆಯಾಗುವುದಾಗಿ ನಂಬಿಸಿ, ಶಾಲೆ ಮುಗಿದ ನಂತರ ಹಲವು ಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾನೆ,” ಎಂದು ತಿಳಿಸಿದ್ದಾಳೆ.

error: Content is protected !!