Friday, November 28, 2025

ಪೊಡವಿಗೊಡೆಯನ ನಾಡಿಗೆ ಪ್ರಧಾನಿ ಮೋದಿ: ವೇಳಾಪಟ್ಟಿಯಲ್ಲಿ ವ್ಯತ್ಯಯ, ಏನೆಲ್ಲಾ ಬದಲಾವಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಪುತ್ತಿಗೆ ಪರ್ಯಾಯದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಮ್ಮಿಕೊಂಡಿರುವ ಲಕ್ಷಕಂಠ ಗೀತಾಪಾರಾಯಣ ಹಾಗೂ ಉಡುಪಿ ಜಿಲ್ಲಾ ಬಿಜೆಪಿಯ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಮೊದಲಿನ ಸಮಯ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ.

ನರೇಂದ್ರ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11.35ಕ್ಕೆ ಬಂದು ಇಳಿದು, 12ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಗ್ಗೆ 11ಗಂಟೆಗೆ ಆದಿಉಡುಪಿಗೆ ಆಗಮಿಸಿ 11ಗಂಟೆಯಿಂದ 11.30ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಠದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1ಗಂಟೆಗೆ ಹೊರಡಲಿದ್ದಾರೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮೋದಿ ಅವರು ಭಾಗವಹಿಸುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಪುತ್ತಿಗೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಬೈರತಿ ಸುರೇಶ್, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸ್ಥಳೀಯ ಶಾಸಕರಾದ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಬಿವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿರುತ್ತಾರೆ.

error: Content is protected !!