Friday, November 28, 2025

ಐಷಾರಾಮಿ ಜೀವನಕ್ಕೆ ‘ಆನ್‌ಲೈನ್ ಲೂಟಿ’: ಚಿನ್ನ, ಐಫೋನ್ ಆಮಿಷವೊಡ್ಡಿದ ಜೋಡಿ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ನಕಲಿ ‘ಗಿಫ್ಟ್ ಕಾರ್ಡ್’ ಆಮಿಷವೊಡ್ಡಿ ಬರೋಬ್ಬರಿ 20 ಲಕ್ಷ ವಂಚಿಸಿದ್ದ ದಂಪತಿಯನ್ನು ಕೋಲಾರ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ರಾಧಾ ಪಾವನ ಮತ್ತು ಸತೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ:

ಸರಿಯಾಗಿ ಏಳು ತಿಂಗಳ ಹಿಂದೆ, ಮಾಲೂರಿನ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರಿಗೆ ವಂಚಕ ದಂಪತಿಗಳು ವಿನೂತನ ರೀತಿಯಲ್ಲಿ ಮೋಸ ಮಾಡಿದ್ದಾರೆ. Meesho Online PVT Ltd. ಲೆಟರ್ ಹೆಡ್ ಇರುವ ನಕಲಿ ಗಿಫ್ಟ್ ಕಾರ್ಡ್ ಅನ್ನು ಪೋಸ್ಟ್ ಮೂಲಕ ಶಿಕ್ಷಕಿಗೆ ಕಳುಹಿಸಿದ್ದರು.

ಆ ಕಾರ್ಡ್‌ನಲ್ಲಿ 10,50,000 ನಗದು, 150 ಗ್ರಾಂ ಚಿನ್ನ ಮತ್ತು ಎರಡು ಐಫೋನ್‌ಗಳು ಲಾಟರಿಯಲ್ಲಿ ಗೆದ್ದಿರುವುದಾಗಿ ಸುಳ್ಳು ಆಮಿಷವೊಡ್ಡಿದ್ದರು. ಈ ಬಹುಮಾನಗಳನ್ನು ಪಡೆಯಲು ‘ಪ್ರೊಸೆಸಿಂಗ್ ಶುಲ್ಕ’ ಮತ್ತು ಇತರೆ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಶಿಕ್ಷಕಿಯಿಂದ ಒಟ್ಟು 20 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಬಂಧನ ಮತ್ತು ವಿಚಾರಣೆ:

ವಂಚನೆಗೆ ಒಳಗಾದ ಶಿಕ್ಷಕಿ ಕೋಲಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಬೆಂಗಳೂರು ಮೂಲದ ಈ ದಂಪತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಈ ದಂಪತಿಗಳು ದೇಶದ ಹಲವೆಡೆ ಇದೇ ಮಾದರಿಯಲ್ಲಿ ಸೈಬರ್ ವಂಚನೆ ಜಾಲವನ್ನು ನಡೆಸುತ್ತಿದ್ದು, ಮೋಸದಿಂದ ಗಳಿಸಿದ ಹಣವನ್ನೆಲ್ಲಾ ತಮ್ಮ ಐಷಾರಾಮಿ ಜೀವನ ಶೈಲಿಗಾಗಿ ಖರ್ಚು ಮಾಡಿರುವುದು ಬಯಲಾಗಿದೆ. ಈ ದಂಪತಿಯ ಆನ್‌ಲೈನ್ ಜಾಲದಲ್ಲಿ ಸಿಲುಕಿ ಹಲವರು ಮೋಸ ಹೋಗಿರುವುದು ದೃಢಪಟ್ಟಿದೆ.

error: Content is protected !!