ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಕುರ್ಚಿ ಕಾಳಗ ಒಂದೆಡೆ ನಡುವೆಟ್ಟಿದ್ದು, ಇದರ ನಡುವೆ ಇಬ್ಬರ ನಡುವೆ ಪೋಸ್ಟ್ ವಾರ್ ಕೂಡ ಶುರುವಾಗಿದೆ.
‘ಕೊಟ್ಟ ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ’ ಎಂಬ ಡಿಕೆಶಿ ಪೋಸ್ಟ್ಗೆ ಸಿದ್ದರಾಮಯ್ಯ ನೇರಾ ನೇರ ಕೌಂಟರ್ ಕೊಟ್ಟಿದ್ದಾರೆ. ‘ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು’ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರೋದು ಸಂಚಲನ ಮೂಡಿಸಿದೆ.
ಸಿದ್ದರಾಮಯ್ಯ ಪೋಸ್ಟ್ನಲ್ಲಿ ಏನಿದೆ?
ಒಂದು ಮಾತು ಉತ್ತಮವಾಗದ ಹೊರತು ಅದು ಶಕ್ತಿಯಲ್ಲ. ಶಕ್ತಿ ಯೋಜನೆ, ಗೃಹಲಕ್ಷ್ಮೀ, ಯುವನಿಧಿ ಮತ್ತು ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.
ನಾವು ನಮ್ಮ ಭರವಸೆಗಳನ್ನ ಪದಗಳಲ್ಲಿ ಅಲ್ಲ ನಿಜ ರೂಪದಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ. ಕರ್ನಾಟಕಕ್ಕೆ ನಮ್ಮ ಮಾತು ಒಂದು ಘೋಷಣೆಯಲ್ಲ. ಅದು ನಮಗೆ ಒಂದಿಡೀ ಜಗತ್ತು ಎಂಬುದನ್ನು ಅರ್ಥೈಸುತ್ತದೆ ಎಂದಿದ್ದಾರೆ.
ನನ್ನ ಮೊದಲ ಅವಧಿಯಲ್ಲಿ (2013–18) ನೀಡಿದ 165 ಭರವಸೆಗಳ ಪೈಕಿ 157ನ್ನು, ಅಂದರೆ ಶೇ. 95ಕ್ಕೂ ಹೆಚ್ಚನ್ನು ಈಡೇರಿಸಿದ್ದೇವೆ. ಈ ಅವಧಿಯಲ್ಲಿನ 593 ಭರವಸೆಗಳಲ್ಲಿ 243ಕ್ಕೂ ಹೆಚ್ಚು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಪ್ರತಿಯೊಂದು ಭರವಸೆಯನ್ನೂ ಬದ್ಧತೆ, ನಂಬಿಕೆ, ಮತ್ತು ಕಾಳಜಿಯೊಂದಿಗೆ ಖಚಿತವಾಗಿ ಪೂರೈಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕದ ಜನತೆ ಕೊಟ್ಟ ಆದೇಶವು ಒಂದು ಕ್ಷಣಿಕ ವಿಶ್ವಾಸವಲ್ಲ ,ಅದು ಐದು ವರ್ಷಗಳ ಪೂರ್ಣ ಹೊಣೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು, ಸಹಾನುಭೂತಿ, ಸತತತೆ, ಮತ್ತು ಧೈರ್ಯ ಎಂಬ ಮೌಲ್ಯಗಳೊಂದಿಗೆ ಜನರಿಗಾಗಿ ಮಾತಿನಂತೆ ನಡೆದುಕೊಳ್ಳುತ್ತಿದೆ. ಕರ್ನಾಟಕಕ್ಕೆ ನೀಡಿದ ನಮ್ಮ ಮಾತು ಒಂದು ಘೋಷಣೆ ಅಲ್ಲ, ಅದೇ ನಮಗೆ ಜಗತ್ತು ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಡಿಸಿಎಂ ಡಿಕೆಶಿ ಮಾರ್ಮಿಕ ಪೋಸ್ಟ್
ಇಂದು ಬೆಳಗ್ಗೆಯಷ್ಟೇ ಡಿಸಿಎಂ ಡಿಕೆಶಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ ಎಂದು ಹೇಳುವ ಮೂಲಕ, ಕೊಟ್ಟ ಮಾತನ್ನು ಮತ್ತೆ ನೆನಪಿಸಿದ್ದರು. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಜಡ್ಜ್ ಆಗಲಿ, ಅಧ್ಯಕ್ಷರಾಗಲಿ, ಯಾರೇ ಆಗಿರಲಿ. ನನ್ನನ್ನು ಸೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದರು. ಆದರೆ ಈ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಆ ರೀತಿ ಪೋಸ್ಟ್ ಮಾಡಿಲ್ಲ ಎಂದು ಡಿಕೆಶಿ ತಿಳಿಸಿದ್ದರು.

