ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಭಾನುವಾರ ನಡೆಯಬೇಕಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮ್ರಿತಿ ಮಂಧಾನ ಅವರ ವಿವಾಹ ಅಚಾನಕ್ಕಾಗಿ ಮುಂದೂಡಲ್ಪಟ್ಟಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಉಂಟು ಮಾಡಿದೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಮದುವೆಯಾಗಬೇಕಿದ್ದ ಸ್ಮೃತಿ, ಮದುವೆಯ ದಿನವೇ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸಮಾರಂಭವನ್ನು ಮುಂದೂಡಿದ್ದಾಗಿ ತಿಳಿದುಬಂದಿದೆ.
ಆದರೆ ಈ ಬೆಳವಣಿಗೆಯ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೇ ಕಾರಣಗಳ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು, ಮದುವೆ ಮುರಿದು ಬೀಳಲು ಮೇರಿ ಡಿ’ಕೋಸ್ಟಾ ಎಂಬ ಯುವತಿ ಕಾರಣ ಎಂಬ ವದಂತಿಯ ಜೊತೆಗೆ ಚಾಟ್ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು.
ಈ ವದಂತಿಗಳಿಗೆ ಈಗ ಡಿ’ಕೋಸ್ಟಾ ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದು, ತಾನು ಪಲಾಶ್ ಅವರನ್ನು ಎಂದಿಗೂ ನೇರವಾಗಿ ಭೇಟಿಯಾಗಿಲ್ಲ ಹಾಗೂ ಕೇವಲ ಒಂದು ತಿಂಗಳಷ್ಟು ಕಾಲ ಮಾತ್ರ ಚಾಟ್ ನಡೆದಿತ್ತು ಎಂದು ಹೇಳಿದ್ದಾರೆ. ತಾನು ನೃತ್ಯ ಸಂಯೋಜಕಿ ಅಲ್ಲ, ಈ ಪ್ರಕರಣದಲ್ಲಿ ಯಾರನ್ನೂ ಮೋಸಗೊಳಿಸಿಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ನಡುವೆಯೇ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಪಲಾಶ್ ಮುಚ್ಚಲ್ ಅವರು ವೈರಲ್ ಸೋಂಕು ಸಮಸ್ಯೆಗಳ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವುದೂ ಗಮನ ಸೆಳೆದಿದೆ. ಮದುವೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

