ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಅಮೆರಿಕದ ಹಿಮಭೂಮಿ ಎಂದು ಕರೆಯಲ್ಪಡುವ ಅಲಾಸ್ಕಾ ರಾಜ್ಯದಲ್ಲಿ ಇಂದು ಮುಂಜಾನೆ ಭೂಮಿ ತೀವ್ರವಾಗಿ ನಡುಗಿದ್ದು, ಜನಜೀವನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆಂಕಾರೇಜ್ ನಗರ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಅನುಭವವಾದ ಈ ಕಂಪನವು ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಸ್ಥಳೀಯ ಸಮಯ ಬೆಳಿಗ್ಗೆ 8 ಗಂಟೆ 11 ನಿಮಿಷಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ಸುಸಿಟ್ನಾ ಪ್ರದೇಶದಿಂದ ವಾಯುವ್ಯಕ್ಕೆ ಸುಮಾರು 12 ಕಿಲೋಮೀಟರ್ ದೂರದಲ್ಲಿ ಹಾಗೂ ಭೂಮಿಯ ಒಳಗೆ ಸುಮಾರು 69 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಭೂಕಂಪದ ಅಲೆಗಳು ಆಂಕಾರೇಜ್‌ನಿಂದ ಸುಮಾರು 108 ಕಿಲೋಮೀಟರ್ ವ್ಯಾಪ್ತಿಯವರೆಗೂ ಅನುಭವಗೊಂಡಿವೆ.
ಆರಂಭಿಕ ವರದಿಗಳ ಪ್ರಕಾರ ಯಾವುದೇ ದೊಡ್ಡ ಪ್ರಮಾಣದ ಹಾನಿ ಅಥವಾ ಪ್ರಾಣಹಾನಿ ಸಂಭವಿಸಿಲ್ಲ. ಭೂಕಂಪದ ಬೆನ್ನಲ್ಲೇ ಅಮೆರಿಕದ ಸುನಾಮಿ ಎಚ್ಚರಿಕಾ ವ್ಯವಸ್ಥೆ ತಕ್ಷಣ ಸ್ಪಷ್ಟನೆ ನೀಡಿ, ಈ ಕಂಪನದಿಂದ ಸುನಾಮಿ ಅಪಾಯ ಇಲ್ಲ ಎಂದು ತಿಳಿಸಿದೆ. ಅಲಾಸ್ಕಾವನ್ನು ವಿಶ್ವದ ಅತ್ಯಂತ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಪ್ರತಿವರ್ಷ ಇಲ್ಲಿ ಸಣ್ಣ ಮತ್ತು ದೊಡ್ಡ ಮಟ್ಟದ ಕಂಪನಗಳು ಸಾಮಾನ್ಯವಾಗಿವೆ.

