Friday, November 28, 2025

ಗುಡ್ ನ್ಯೂಸ್: ಪ್ರತಿ ಸೋಮವಾರ ಬೆಳ್ಳಂಬೆಳಗ್ಗೆ ಈ ಮಾರ್ಗದಿಂದ ಹೊರಡುತ್ತೆ ನಮ್ಮ ಮೆಟ್ರೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರ ನಿರಂತರ ಒತ್ತಾಯಕ್ಕೆ ಸ್ಪಂದಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆ, ಆರ್‌.ವಿ. ರಸ್ತೆ – ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸೋಮವಾರಗಳಂದು ಮುಂಜಾನೆ ಮೆಟ್ರೋ ಸೇವೆ ಆರಂಭಿಸಲು ತೀರ್ಮಾನಿಸಿದೆ.

ಸೋಮವಾರ ಬೆಳಿಗ್ಗೆ 5 ಗಂಟೆ 5 ನಿಮಿಷ ಹಾಗೂ 5 ಗಂಟೆ 35 ನಿಮಿಷಕ್ಕೆ ಎರಡು ರೈಲು ಸೇವೆಗಳು ಸಂಚಾರ ಆರಂಭಿಸಲಿವೆ. ಇದುವರೆಗೆ ಈ ಮಾರ್ಗದಲ್ಲಿ ಬೆಳಿಗ್ಗೆ 6 ಗಂಟೆಗೆ ಮಾತ್ರ ಸೇವೆ ಆರಂಭವಾಗುತ್ತಿತ್ತು. ಕಳೆದ ವಾರ ರೈಲು ಸಂಚಾರದ ವಿಳಂಬ ಹಾಗೂ ಅಸೌಕರ್ಯದ ವಿರುದ್ಧ ಪ್ರಯಾಣಿಕರು ವ್ಯಕ್ತಪಡಿಸಿದ ಅಸಮಾಧಾನ ಹಾಗೂ ಪ್ರತಿಭಟನೆಯ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೋಮವಾರ ಹೊರತುಪಡಿಸಿ ಇತರ ದಿನಗಳಲ್ಲಿ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 6 ಗಂಟೆಗೆ ಹಾಗೂ ಭಾನುವಾರ 7 ಗಂಟೆಗೆ ಮೆಟ್ರೋ ಸಂಚಾರ ಮುಂದುವರಿಯಲಿದೆ. ಈ ವೇಳಾಪಟ್ಟಿ ಬದಲಾವಣೆಯ ಮಾಹಿತಿಯನ್ನು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಈಗಾಗಲೇ ಹಸಿರು ಹಾಗೂ ನೇರಳೆ ಮಾರ್ಗಗಳಲ್ಲಿ ಪ್ರತಿದಿನ ಬೆಳಿಗ್ಗೆ 5 ಗಂಟೆ 5 ನಿಮಿಷಕ್ಕೆ ಮೆಟ್ರೋ ಸೇವೆ ಆರಂಭವಾಗುತ್ತಿದೆ. ಹಸಿರು ಮಾರ್ಗದಿಂದ ಆರ್‌.ವಿ. ರಸ್ತೆ ಇಂಟರ್‌ಚೇಂಜ್‌ಗೆ ಮುಂಜಾನೆ ಬಂದ ಪ್ರಯಾಣಿಕರು ಹಳದಿ ಮಾರ್ಗದ ರೈಲಿಗಾಗಿ ಹೆಚ್ಚು ಸಮಯ ಕಾಯಬೇಕಾಗುತ್ತಿದ್ದರಿಂದ ಅಸಹನೆ ಹೆಚ್ಚಾಗಿತ್ತು. ಈ ಸಮಸ್ಯೆ ನಿವಾರಣೆಗೆ ಇದೀಗ ಸೋಮವಾರ ಮುಂಜಾನೆ ಸೇವೆ ಆರಂಭಿಸುವ ಮೂಲಕ ಪ್ರಯಾಣಿಕರಿಗೆ ದೊಡ್ಡ ಅನುಕೂಲ ಕಲ್ಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

error: Content is protected !!