ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ವಿಜ್ಞಾನ ಶಿಕ್ಷಣವನ್ನು ತಲುಪಿಸುವ ಮಹತ್ವಾಕಾಂಕ್ಷಿ “ಶಾಲೆಯ ಅಂಗಳದಲ್ಲಿ ತಾರಾಲಯ” ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಂ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಯೋಜನೆ ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದ್ದು, ಈ ಸಾಧನೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ರಾಜ್ಯದ ಶಾಲಾ ಮಕ್ಕಳಲ್ಲಿ ಖಗೋಳ ಶಾಸ್ತ್ರದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಸಂಚಾರಿ ಡಿಜಿಟಲ್ ತಾರಾಲಯ ಯೋಜನೆಗೆ ಇಂದು ಚಾಲನೆ ನೀಡಿದೆ ಎಂದು ಸಿಎಂ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಮಾತನಾಡಿ, ಈ ಯೋಜನೆಗೆ ಹೊಸ ಚೈತನ್ಯ ಮತ್ತು ಸುಧಾರಿತ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಪ್ರಸ್ತುತ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಮಹತ್ವದ ಸೇವೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಕ್ಕಳು ತಲುಪುವಂತೆ ವಿಸ್ತರಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ನಗರಗಳಿಗೆ ಸೀಮಿತವಾಗಿದ್ದ ಪ್ಲಾನೆಟೇರಿಯಂ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿತವಾಗಿದೆ. ಸುಸಜ್ಜಿತ ವಾಹನಗಳಲ್ಲಿ 5 ಮೀಟರ್ ಗಾತ್ರದ ಗುಂಬಜ್ , 360-ಡಿಗ್ರಿ ಫಿಶ್ ಐ ಲೆನ್ಸ್ ಪ್ರೊಜೆಕ್ಟರ್, ಹವಾ ನಿಯಂತ್ರಣ ವ್ಯವಸ್ಥೆ ಮತ್ತು ಅತ್ಯಾಧುನಿಕ ಧ್ವನಿವರ್ಧಕಗಳನ್ನು ಅಳವಡಿಸಲಾಗಿರುತ್ತದೆ. ಮಕ್ಕಳು ಶಾಲೆಯ ಅಂಗಳದಲ್ಲೇ ಕುಳಿತು ಬ್ರಹ್ಮಾಂಡದ ಅದ್ಭುತಗಳನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಇದು ಕಲ್ಪಿಸಲಿದೆ. ಈ ಮೂಲಕ ರಾಜ್ಯದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

