ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯ ಪವಿತ್ರ ಧಾರ್ಮಿಕ ಕೇಂದ್ರ ಉಡುಪಿಯಲ್ಲಿ ಇಂದು ವಿಶೇಷ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಠದ ಆವರಣದಲ್ಲಿರುವ ಸ್ವರ್ಣ ಲೇಪಿತ ನೂತನ ತೀರ್ಥ ಮಂಟಪವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪುತ್ತಿಗೆ ಸ್ವಾಮೀಜಿಗಳ ಸನ್ಯಾಸ ಜೀವನದ ಸ್ವರ್ಣ ಮಹೋತ್ಸವದ ನೆನಪಿಗಾಗಿ ಮಂಟಪಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಬಳಿಕ ಮೋದಿ ಮಠಾಧೀಶರೊಂದಿಗೆ ಸಂವಾದ ನಡೆಸಿದ್ದು, ಶ್ರೀಕೃಷ್ಣನ ಪ್ರಸಾದ ಸ್ವೀಕರಿಸಿದ ಪ್ರಧಾನಿ, ಅಚಾರ್ಯ ಮಧ್ವರ ಸರ್ವಜ್ಞ ಪೀಠ ಹಾಗೂ ಮಠದ ವಿವಿಧ ದೇವಾಲಯಗಳ ದರ್ಶನ ಮಾಡಿದರು.
ನಂತರ ಗೀತಾ ಮಂದಿರಕ್ಕೆ ತೆರಳಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆಯನ್ನು ಅನಾವರಣಗೊಳಿಸಿ ಧ್ಯಾನ ಮಂದಿರವನ್ನು ವೀಕ್ಷಿಸಿದರು. ಅಲ್ಲಿಂದ ಅವರು ಲಕ್ಷಕಂಠ ಭಗವದ್ಗೀತಾ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಹಸ್ರಾರು ಭಕ್ತರೊಂದಿಗೆ ಗೀತಾ ಪಾರಾಯಣದಲ್ಲಿ ಭಾಗಿಯಾದರು.

