Friday, November 28, 2025

ಸ್ವಚ್ಛತೆ, ಅನ್ನದಾಸೋಹ ಸೇವೆ: ಉಡುಪಿಯ ಅಷ್ಟ ಮಠಗಳ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮ ಮಂದಿರ ನಿರ್ಮಾಣದ ಆಂದೋಲನದಲ್ಲಿ ಉಡುಪಿ ಜನರ ಪಾತ್ರ ಇಡೀ ದೇಶಕ್ಕೆ ತಿಳಿದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಹೊಸ ರಾಮ ಮಂದಿರದಲ್ಲಿ ಜಗದ್ಗುರು ಮಧ್ವಾಚಾರ್ಯರ ಹೆಸರಿನಲ್ಲಿ ದ್ವಾರವೊಂದನ್ನು ನಿರ್ಮಿಸಿರುವುದು ಉಡುಪಿಗೆ ಮತ್ತೊಂದು ಹೆಮ್ಮೆಯ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದರು.

ಉಡುಪಿಯ ಐತಿಹಾಸಿಕ ‘ಲಕ್ಷ ಕಂಠ ಭಗವದ್ಗೀತಾ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಮಧ್ವಾಚಾರ್ಯರ ಈ ಪುಣ್ಯ ಭೂಮಿಗೆ ಬರುವುದು ಪರಮ ಸೌಭಾಗ್ಯ. ಗುರುಗಳು ಮತ್ತು ಯತಿಗಳ ಜೊತೆ ಇರುವುದು ಅಸಂಖ್ಯಾತ ಪುಣ್ಯ ಸಂಪಾದಿಸಿದಂತಾಗಿದೆ ಎಂದು ನುಡಿದರು.

ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿಯ ಪಾತ್ರವನ್ನು ಸ್ಮರಿಸಿದ ಪ್ರಧಾನಿಗಳು, ದಿವಂಗತ ಪೇಜಾವರ ಶ್ರೀಗಳ ತ್ಯಾಗ ಮತ್ತು ಪಾತ್ರವನ್ನು ನಾವು ಸದಾ ಸ್ಮರಿಸಬೇಕು. ಮಂದಿರ ನಿರ್ಮಾಣದಲ್ಲಿ ಉಡುಪಿಗೆ ಹಲವು ರೀತಿಯಲ್ಲಿ ವಿಶೇಷತೆ ಇದೆ. ರಾಮ ಮಂದಿರ ಪರಿಷತ್‌ನ ಒಂದು ಪ್ರಮುಖ ದ್ವಾರಕ್ಕೆ ಮಧ್ವಾಚಾರ್ಯರ ಹೆಸರಿಟ್ಟಿರುವುದು ಉಡುಪಿಗೆ ಸಂದ ಮತ್ತೊಂದು ಗೌರವ ಎಂದು ಹೇಳಿದರು.

ಲಕ್ಷ ಕಂಠ ಗೀತಾ ಪಠಣಕ್ಕೆ ಅಭಿನಂದನೆ

ಈ ಕಾರ್ಯಕ್ರಮದಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಭಗವದ್ಗೀತೆ ಪಠಣ ಮಾಡಿದ್ದು ಒಂದು ಮಹಾನ್ ಸಾಧನೆ. ಇದನ್ನು ಯಶಸ್ವಿಗೊಳಿಸಿದ ಸುಗುಣೇಂದ್ರ ತೀರ್ಥ ಶ್ರೀಗಳ ಸಹಿತ ಉಡುಪಿಯ ಅಷ್ಟ ಮಠಗಳ ಶ್ರೀಗಳಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ಇದೇ ವೇಳೆ, ಈ ಅಭಿಯಾನವು ಸನಾತನ ಪರಂಪರೆಯ ಒಂದು ಸಾಂಸ್ಕೃತಿಕ ಜನಾಂದೋಲನವಾಗಿದೆ. ವೇದ, ಉಪನಿಷತ್ ಮತ್ತು ಶಾಸ್ತ್ರಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಈ ಸಾಮೂಹಿಕ ಗೀತಾ ಪಠಣ ಕಾರ್ಯಕ್ರಮವು ಆ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಅಷ್ಟ ಮಠಗಳ ಸೇವೆಗೆ ಮೆಚ್ಚುಗೆ

ಉಡುಪಿಯ ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಪ್ರಧಾನಿಯವರು ಹಾಡಿಹೊಗಳಿದರು. “ಸ್ವಚ್ಛತಾ ಅಭಿಯಾನವನ್ನು ನಾವು ಆರಂಭಿಸುವುದಕ್ಕೂ ಮೊದಲೇ ಉಡುಪಿಯಲ್ಲಿ ಜಲ ಸಂರಕ್ಷಣೆ ಮತ್ತು ಒಳಚರಂಡಿ ವ್ಯವಸ್ಥೆಗಳ ಕಾರ್ಯ ಆರಂಭವಾಗಿತ್ತು. ಮಧ್ವಾಚಾರ್ಯರು ಅಷ್ಟ ಮಠಗಳ ಸ್ಥಾಪನೆ ಮಾಡಿ ಹೊಸ ಯುಗಕ್ಕೆ ದಾರಿ ಮಾಡಿಕೊಟ್ಟರು,” ಎಂದು ತಿಳಿಸಿದರು.

ಇಲ್ಲಿನ ಅಷ್ಟ ಮಠಗಳು ಕೇವಲ ಶ್ರೀಕೃಷ್ಣನ ಭಕ್ತಿಯ ಜೊತೆಗೆ, ಅನ್ನದಾಸೋಹದ ಸೇವೆಯನ್ನೂ ಮಾಡುತ್ತಿವೆ. ನಿತ್ಯವೂ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿರುವ ಉಡುಪಿಯ ಮಠಗಳ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ಮೋದಿ ತಿಳಿಸಿದರು.

error: Content is protected !!