ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಗಾದಿಯ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬಹಿರಂಗ ರೂಪ ಪಡೆದಿದೆ. ಇದುವರೆಗೆ ಈ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತ್ರ ಸೀಮಿತವಾಗಿದ್ದ ಅಧಿಕಾರ ಹಂಚಿಕೆ ಕುರಿತ ಮಾತಿನ ಸಮರ, ಈಗ ನಾಯಕರೇ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಟ್ವೀಟ್ ವಾರ್ಗೆ ಇಳಿದಿದ್ದಾರೆ.
ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿಯೇ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನಂಬಿಕೆಯ ಮಹತ್ವವನ್ನು ಸಾರುವ ಸರ್ವಜ್ಞನ ವಚನವನ್ನು ಉಲ್ಲೇಖಿಸಿದರು. “ನಿಂಬೆಗಿನ್ ಹುಳಿಯಿಲ್ಲ, ತುಂಬಿಗಿಂಬ್ ಕರಿಯಿಲ್ಲ. ಶಂಭುಗಿಂಬ್ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲವೆಂದ” ಎಂಬ ವಚನವನ್ನು ಹೇಳಿ, ಕೊಟ್ಟ ಮಾತಿಗೆ ಹಾಗೂ ನಂಬಿಕೆಗೆ ಇರುವ ಶಕ್ತಿಯ ಬಗ್ಗೆ ವಿವರಿಸಿದರು. ತಮ್ಮ ಭಾಷಣದ ನಂತರ, ಡಿ.ಕೆ. ಶಿವಕುಮಾರ್ ಅವರು ಇದೇ ವಚನವನ್ನು ಬಳಸಿ, “ಕೊಟ್ಟ ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ” ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು.
ಡಿಕೆಶಿಯವರ ಈ ಪೋಸ್ಟ್‌ಗೆ ಸಿಎಂ ಸಿದ್ದರಾಮಯ್ಯ ಅವರು ತಡಮಾಡದೆ ನೇರ-ನೇರ ಕೌಂಟರ್ ನೀಡಿದ್ದಾರೆ. ಡಿಕೆಶಿ ಪೋಸ್ಟ್‌ನ ಸಾರಾಂಶಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, “ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು” ಎಂದು ಟ್ವೀಟ್ ಮಾಡಿದ್ದಾರೆ.
ಸಿಎಂ ಕುರ್ಚಿಗಾಗಿ ಈ ಇಬ್ಬರು ನಾಯಕರ ನಡುವೆ ಆಂತರಿಕವಾಗಿ ನಡೆಯುತ್ತಿರುವ ಶೀತಲ ಸಮರಕ್ಕೆ, ‘ನಂಬಿಕೆ’ ಮತ್ತು ‘ಮಾತು’ ಎಂಬ ಪದಗಳ ಮೂಲಕ ನೀಡಲಾದ ಈ ಬಹಿರಂಗ ಹೇಳಿಕೆಗಳು ಮತ್ತಷ್ಟು ಪುಷ್ಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.

