January22, 2026
Thursday, January 22, 2026
spot_img

ರಾಹುಲ್-ಖರ್ಗೆ 2 ಗಂಟೆಗಳ ಮಂಥನ: ‘ಕುರ್ಚಿ’ಯನ್ನು ಉಳಿಸಿಕೊಳ್ಳುತ್ತಾರಾ ಸಿದ್ಧರಾಮಯ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಆಂತರಿಕ ಬಿಕ್ಕಟ್ಟು ಮತ್ತು “ಕುರ್ಚಿ ಕದನ” ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಎಐಸಿಸಿ ಹೈಕಮಾಂಡ್ ಮಟ್ಟದಲ್ಲಿ ಮಹಾ ಸಭೆಗಳು ಆರಂಭಗೊಂಡಿವೆ.

ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ, ಕರ್ನಾಟಕದ ಇಂದಿನ ‘ಬ್ರೇಕ್​ಫಾಸ್ಟ್’ ರಾಜಕೀಯ ವಿದ್ಯಮಾನಗಳು ಸೇರಿದಂತೆ ಈವರೆಗಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಖರ್ಗೆ ಅವರು ರಾಹುಲ್ ಗಾಂಧಿಯವರಿಗೆ ಮಾಹಿತಿ ನೀಡಿದರು. ಮುಖ್ಯವಾಗಿ, ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದು, ಈ ನಿರ್ಧಾರದ ಸಾಧಕ-ಬಾಧಕಗಳ ಬಗ್ಗೆಯೂ ಕೂಲಂಕಷ ವಿಮರ್ಶೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ನಾಳೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಿರ್ಣಾಯಕ ಸಭೆ

ಈ ಮಹತ್ವದ ಬೆಳವಣಿಗೆಗಳ ಬೆನ್ನಲ್ಲೇ, ನಾಳೆ ಸಂಜೆ ಐದು ಗಂಟೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಜೊತೆಗೂ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ. ಹೀಗಾಗಿ, ನಾಳೆ ನಡೆಯಲಿರುವ ಈ ಸಭೆ ನಿರ್ಣಾಯಕವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಭವಿಷ್ಯವನ್ನು ನಿರ್ಧರಿಸಲಿದೆ.

ರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಸ್ವತಃ ಹೈಕಮಾಂಡ್‌ ಮಧ್ಯಪ್ರವೇಶಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿತ್ತು. ಅದರಂತೆ, ಇಂದು ಬೆಳಿಗ್ಗೆ ಸಿಎಂ ಮತ್ತು ಡಿಸಿಎಂ ಉಪಾಹಾರ ಸಭೆ ನಡೆಸಿದ್ದಾರೆ. ಈ ಇಬ್ಬರೂ ನಾಯಕರು ಹೈಕಮಾಂಡ್‌ನ ಅಂತಿಮ ನಿರ್ಧಾರಕ್ಕೆ ತಾವು ಬದ್ಧ ಎಂದು ತಿಳಿಸಿರುವುದು ಪರಿಸ್ಥಿತಿ ಇನ್ನಷ್ಟು ರೋಚಕಗೊಳಿಸಿದೆ.

Must Read