March 11, 2026
Wednesday, March 11, 2026
spot_img

ವೈದ್ಯರ ನಿರ್ಲಕ್ಷ್ಯದ ಆರೋಪ: ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ಯುವ ಬಾಣಂತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕುಟುಂಬದವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ:

ಮೃತರನ್ನು ಶಿವಮೊಗ್ಗದ ಇಮಾಂಬಾಡಾ ಬಡಾವಣೆಯ ನಿವಾಸಿ ನೂರ್ ಅಫ್ಸಾ (25) ಎಂದು ಗುರುತಿಸಲಾಗಿದೆ. ನವೆಂಬರ್ 20 ರಂದು ಹೆರಿಗೆಗಾಗಿ ನೂರ್ ಅಫ್ಸಾ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ, ನವೆಂಬರ್ 21 ರಂದು, ವೈದ್ಯರು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಗಂಡು ಮಗುವನ್ನು ಹೊರತೆಗೆದಿದ್ದರು.

ಆದರೆ, ಆಪರೇಷನ್ ಆದ ಎರಡು ದಿನಗಳ ನಂತರ ನೂರ್ ಅಫ್ಸಾ ಅವರಿಗೆ ಮಲ ವಾಂತಿಯಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಎಚ್ಚೆತ್ತ ವೈದ್ಯರು, ಮತ್ತೊಮ್ಮೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಎರಡನೇ ಆಪರೇಷನ್ ಬಳಿಕ ಮಹಿಳೆಯ ಆರೋಗ್ಯ ತೀವ್ರವಾಗಿ ಹದಗೆಟ್ಟು, ಕೊನೆಯುಸಿರೆಳೆದಿದ್ದಾರೆ.

ವೈದ್ಯರ ಪ್ರಥಮ ಶಸ್ತ್ರಚಿಕಿತ್ಸೆಯಲ್ಲಿ ಉಂಟಾದ ಲೋಪವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆಯ ಎದುರು ಆಕ್ರಂದನ ಮುಗಿಲುಮುಟ್ಟಿತ್ತು. ಮೃತ ನೂರ್ ಅಫ್ಸಾ ಅವರು 3 ವರ್ಷದ ಹೆಣ್ಣು ಮಗು ಮತ್ತು ಕೇವಲ 8 ದಿನದ ಹಸುಗೂಸನ್ನು ಅಗಲಿದ್ದಾರೆ. ತಾಯಿಯ ಅಕಾಲಿಕ ಮರಣದಿಂದ ಕುಟುಂಬದ ಸದಸ್ಯರು ಮತ್ತು ಕಂದಮ್ಮಗಳ ಆಕ್ರೋಶ ಹಾಗೂ ಕಣ್ಣೀರು ನೋಡುಗರ ಮನ ಕಲುಕುವಂತಿತ್ತು.

ಸದ್ಯ, ಮೃತಳ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಯ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !