January22, 2026
Thursday, January 22, 2026
spot_img

‘ದಿತ್ವಾ’ ಚಂಡಮಾರುತದ ಪ್ರಭಾವ: ಬೆಂಗಳೂರಿಗೆ ಮಿನಿ ಸ್ವಿಟ್ಜರ್‌ಲ್ಯಾಂಡ್‌ನ ಸೌಂದರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ರೂಪುಗೊಂಡಿದ್ದ ‘ದಿತ್ವಾ’ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟಾಗಿದೆ. ಅದರಲ್ಲೂ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ದಾಖಲೆ ಮಟ್ಟದ ಚಳಿ ಅನುಭವಕ್ಕೆ ಬರುತ್ತಿದೆ. ಮಧ್ಯಾಹ್ನದ ವೇಳೆಯಲ್ಲೂ ಮೈ ಕೊರೆಯುವ ತಣ್ಣನೆಯ ಗಾಳಿ ಬೀಸುತ್ತಿದ್ದು, ರಾಜಧಾನಿಯ ಜನ ಥಂಡಿಗೆ ಗಡಗಡ ಎನ್ನುವಂತಾಗಿದೆ.

ತಾಪಮಾನ ಮತ್ತಷ್ಟು ಕುಸಿತದ ಮುನ್ಸೂಚನೆನಗರದಲ್ಲಿ ಕಳೆದ ಎರಡು ದಿನಗಳಿಂದ ತಾಪಮಾನ ಹಠಾತ್ ಕುಸಿತ ಕಂಡಿದ್ದು, ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ, ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರಿನ ತಾಪಮಾನವು ಇನ್ನಷ್ಟು ಇಳಿಕೆ ಕಂಡು 12 ಡಿಗ್ರಿ ಸೆಲ್ಸಿಯಸ್‌ ವರೆಗೆ ಕುಸಿಯುವ ಸಾಧ್ಯತೆಯಿದೆ. ಅಂದರೆ, ಸಾಮಾನ್ಯಕ್ಕಿಂತ ಸುಮಾರು 4 ಡಿಗ್ರಿಯಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.

ದಿತ್ವಾ ಚಂಡಮಾರುತವು ತಮಿಳುನಾಡು ಮತ್ತು ಆಂಧ್ರ ಕರಾವಳಿಗೆ ಅಪ್ಪಳಿಸಿರುವ ಪರಿಣಾಮ, ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದೆ.

ಮಳೆ ಸಾಧ್ಯತೆ ಇರುವ ಜಿಲ್ಲೆಗಳು: ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ.

ಒಣ ಹವೆ ಮುಂದುವರಿಯುವ ಜಿಲ್ಲೆಗಳು: ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆಯೇ ಇರಲಿದೆ.

ಬೆಂಗಳೂರಿಗೆ ಮಿನಿ ಸ್ವಿಟ್ಜರ್‌ಲ್ಯಾಂಡ್‌ನ ಸೌಂದರ್ಯ!

ತೀವ್ರ ಚಳಿಯಿಂದಾಗಿ ನಗರದ ಹಲವೆಡೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದು, ಬೆಂಗಳೂರು ಸಂಪೂರ್ಣವಾಗಿ ಹೊಸ ರೂಪ ಪಡೆದಿದೆ. ಈ ಮೋಹಕ ವಾತಾವರಣವನ್ನು ನೋಡಿದ ವಾಯು ವಿಹಾರಿಗಳು, “ಮಾಲಿನ್ಯವೂ ಕಡಿಮೆಯಾಗಿರುವುದರಿಂದ ಕಳೆದ ಒಂದು ವಾರದಿಂದ ಬೆಂಗಳೂರಿನ ವಾತಾವರಣವು ಹಳೆಯ ಬೆಂಗಳೂರಿನ ರೀತಿ ಅಥವಾ ಮಿನಿ ಸ್ವಿಟ್ಜರ್‌ಲ್ಯಾಂಡ್‌ನಂತೆ ಭಾಸವಾಗುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮತ್ತು ಶೀತದ ವಾತಾವರಣ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

Must Read