January22, 2026
Thursday, January 22, 2026
spot_img

ನನ್ನ,ಮುಖ್ಯಮಂತ್ರಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟಾಗಿದೆ ಎನ್ನುವ ವದಂತಿಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದು, ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮತ್ತೆ ಒತ್ತಿ ಹೇಳಿದ್ದಾರೆ.

ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028 ರ ಚುನಾವಣೆ ನಮ್ಮ ಮುಂದಿನ ಗುರಿ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ನಾನು ಯಾವತ್ತೂ ಗುಂಪುಗಾರಿಕೆ ಮಾಡುವುದಿಲ್ಲ. ಎಲ್ಲರೂ ಗಮನಿಸಿರುವಂತೆ ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ನಾನು 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿ ಇರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡಲ್ಲ. ನಾನು ಕುಮಾರಸ್ವಾಮಿ ಅವರ ಜತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಮಿ ಅವರು ಒಪ್ಪದೇ ಇರಬಹುದು, ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ಗೊತ್ತಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು ಎಂದರು.

ದೆಹಲಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ಅಪ್ಪ ಮಗನ ಭೇಟಿಗೂ ನೀವು ಅರ್ಥ ಕಲ್ಪಿಸುತ್ತೀರಾ? ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕಾ? ಪ್ರಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಉದ್ಘಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದೆವು, ಅವರು ಬರಲು ಆಗಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಅದರ ಬಗ್ಗೆ ಮಾಹಿತಿ ಪಡೆಯಲು ಕರೆದಿದ್ದರು. ಹೀಗಾಗಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಅವರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಇಲ್ಲೂ ರಾಜಕೀಯ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವೇ? ಅಪ್ಪ ಮಕ್ಕಳು, ಅಣ್ಣ ತಮ್ಮ ಸೇರಿದಾಗ ರಾಜಕೀಯವೇ? ಬೇರೆಯವರು ಸೇರಿದಾಗ ನಿಮಗೆ ಲೆಕ್ಕಕ್ಕೆ ಇರುವುದಿಲ್ಲ. ನಮ್ಮದು ಮಾತ್ರ ಲೆಕ್ಕ ಹಾಕುತ್ತೀರಿ ಎಂದು ಹೇಳಿದರು.

Must Read