Monday, December 1, 2025

ಪ್ರತಿಭೆಗೆ ಟೆಸ್ಲಾ ಒಡೆಯನ ಸಲಾಂ: ಅಮೆರಿಕದ ಬೆಳವಣಿಗೆಗೆ ಭಾರತೀಯ ಬ್ರೈನ್ ಪವರ್ ಅತ್ಯಗತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥರಾದ ಎಲಾನ್ ಮಸ್ಕ್ ಅವರು, ಅಮೆರಿಕದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಭಾರತೀಯ ಮೂಲದ ಪ್ರತಿಭೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮಸ್ಕ್, “ಅಮೆರಿಕಕ್ಕೆ ಬಂದಿರುವ ಪ್ರತಿಭಾವಂತ ಭಾರತೀಯರಿಂದ ಅಮೆರಿಕವು ಅಪಾರ ಪ್ರಯೋಜನ ಪಡೆದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳುವ ಮೂಲಕ ಭಾರತೀಯ ವೃತ್ತಿಪರರ ಕೊಡುಗೆಯನ್ನು ಶ್ಲಾಘಿಸಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟುನಿಟ್ಟಾದ ಅಕ್ರಮ ವಲಸಿಗರ ನಿಯಮಗಳು ಮತ್ತು H-1B ವೀಸಾ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತಾದ ಬಿಸಿ ಚರ್ಚೆಯ ನಡುವೆಯೇ ಮಸ್ಕ್ ಅವರ ಈ ಹೇಳಿಕೆ ಬಂದಿರುವುದು ಮಹತ್ವ ಪಡೆದಿದೆ.

H-1B ವೀಸಾ ವ್ಯವಸ್ಥೆಯ ದುರುಪಯೋಗದ ಬಗ್ಗೆ ಮಾತನಾಡಿದ ಅವರು, “H-1B ವೀಸಾ ಪಡೆದು ಕೆಲವು ದುರುಪಯೋಗಗಳು ನಡೆದಿವೆ. ಕೆಲವು ಹೊರಗುತ್ತಿಗೆ ಕಂಪನಿಗಳು ವ್ಯವಸ್ಥೆಯನ್ನು ಒಂದು ರೀತಿಯಲ್ಲಿ ಮೋಸಗೊಳಿಸಿವೆ” ಎಂದು ಒಪ್ಪಿಕೊಂಡರು. ಆದರೆ, ಇದಕ್ಕೆ ಪರಿಹಾರವಾಗಿ ವೀಸಾವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು, ವ್ಯವಸ್ಥೆಯಲ್ಲಿ ಆಟವಾಡುವುದನ್ನು ನಿಲ್ಲಿಸುವುದು ಅಂದರೆ ವ್ಯವಸ್ಥೆಯನ್ನು ಸುಧಾರಿಸುವುದು ಹೆಚ್ಚು ಸೂಕ್ತ ಎಂದು ಮಸ್ಕ್ ಪ್ರತಿಪಾದಿಸಿದರು.

error: Content is protected !!