Monday, December 1, 2025

ಅಡುಗೆ ಮನೆಯ ‘ಕೆಂಪು ಸುಂದರಿ’ಗೆ ಚಿನ್ನದ ಬೆಲೆ: ಗ್ರಾಹಕರಿಗೆ ಬರೆ.. ರೈತರಿಗೆ ‘ಲಾಭ’ದ ಸಿಹಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಡುಗೆಮನೆಯ ‘ಕೆಂಪು ಸುಂದರಿ’ ಎಂದೇ ಖ್ಯಾತಿ ಪಡೆದಿರುವ ಟೊಮೆಟೊ ಬೆಲೆ ಇದೀಗ ಗಗನಕ್ಕೇರಿದೆ. ಕಳೆದ ಒಂದು ವರ್ಷದಿಂದ ಮಾರುಕಟ್ಟೆಯಲ್ಲಿ ನೆಲಕಚ್ಚಿದ್ದ ಟೊಮೆಟೊ ಬೆಲೆ, ಇದೀಗ ದಿಢೀರ್ ಏರಿಕೆ ಕಂಡಿರುವುದು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಟೊಮೆಟೊ ಇಲ್ಲದೆ ಅಡುಗೆಯ ರುಚಿ ಅಪೂರ್ಣ ಎಂಬಷ್ಟರ ಮಟ್ಟಿಗೆ ಗೃಹಿಣಿಯರ ಅಡುಗೆ ಕೋಣೆಯಲ್ಲಿ ಸ್ಥಾನ ಪಡೆದಿರುವ ಈ ತರಕಾರಿ, ಸದ್ಯ ತಮ್ಮ ಸಾಮಾನ್ಯ ಬೆಲೆಯನ್ನು ಮೀರಿ ನಿಂತಿದೆ.

ಕಳೆದ ವರ್ಷದ ಬಹುಪಾಲು ಅವಧಿಯಲ್ಲಿ ಟೊಮೆಟೊ ಬೆಲೆ ಅಷ್ಟೊಂದು ಇರಲೇ ಇಲ್ಲ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರು, ತಾವು ಬೆಳೆದ ಬೆಳೆಯನ್ನು ರಸ್ತೆಗೆ ಸುರಿದು ಕಣ್ಣೀರಿಟ್ಟ ಘಟನೆಗಳು ಸಾಕಷ್ಟು ವರದಿಯಾಗಿದ್ದವು. ಆಗ ಗ್ರಾಹಕರು ಖುಷಿಯಿಂದ ಖರೀದಿಸಿದರೆ, ಬೆಳೆಗಾರರು ಮಾತ್ರ ಕಷ್ಟದಲ್ಲಿದ್ದರು.

ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಟೊಮೆಟೊಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ವಿಪರೀತ ಏರಿಕೆಯಾಗಿದೆ. ಇದೀಗ ಪ್ರತಿ ಕೆಜಿ ಟೊಮೆಟೊ ಮಾರುಕಟ್ಟೆಯಲ್ಲಿ 70 ರಿಂದ 90 ರ ವರೆಗೆ ಮಾರಾಟವಾಗುತ್ತಿದೆ.

ಟೊಮೆಟೊ ಬೆಲೆ ಏರಿಕೆಯು ಎಷ್ಟರಮಟ್ಟಿಗೆ ಇದೆ ಎಂದರೆ, ಕೆಜಿಗೆ 100 ರೂಪಾಯಿ ಇರುವ ಸೇಬಿನ ಬೆಲೆಗೆ ಸರಿಸಮನಾಗಿ ಟೊಮೆಟೊ ದರ ಸ್ಪರ್ಧಿಸುತ್ತಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿಯ ಒಂದು ಕ್ರೇಟ್ ಟೊಮೆಟೊ ಸರಾಸರಿ 700 ರೂಪಾಯಿಗೆ ಮಾರಾಟವಾಗುತ್ತಿದೆ. ಒಂದು ಕಡೆ ಮಾರುಕಟ್ಟೆಯಲ್ಲಿ ಸೇಬು ಹೇರಳವಾಗಿ ಕಾಣುತ್ತಿದ್ದರೆ, ಮತ್ತೊಂದೆಡೆ ಟೊಮೆಟೊ ಮಾತ್ರ ಕಣ್ಮರೆಯಾಗುತ್ತಿದೆ.

ದೇಶ-ವಿದೇಶಗಳಲ್ಲಿ ಸದಾ ಬೇಡಿಕೆ ಇರುವ ಈ ಬೆಳೆಯನ್ನು ರೈತರು ವರ್ಷದ 365 ದಿನಗಳೂ ಬೆಳೆಯುತ್ತಾರೆ. ಆದರೆ, ಸೂಕ್ತ ಬೆಲೆ ಸಿಗುವ ಸನ್ನಿವೇಶಗಳು ಬಹಳ ವಿರಳ. ಈಗ ಬೆಲೆ ಹೆಚ್ಚಳದಿಂದ ರೈತರಿಗೆ ನೆಮ್ಮದಿ ಸಿಕ್ಕಿದೆಯಾದರೂ, ದಿನನಿತ್ಯದ ಅಡುಗೆಯಲ್ಲಿ ಟೊಮೆಟೊ ಬಳಸುವ ಸಾಮಾನ್ಯ ಗ್ರಾಹಕರ ಜೇಬಿಗೆ ಇದು ದೊಡ್ಡ ಹೊರೆಯಾಗಿದೆ.

error: Content is protected !!