ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ, ತಮಿಳುನಾಡಿನ ಕೆಲವು ಭಾಗಗಳಲ್ಲಿ ಆತಂಕ ಮೂಡಿಸಿರುವ ದಿತ್ವಾ ಚಂಡಮಾರುತದ ಬಿರುಗಾಳಿ ದುರ್ಬಲಗೊಂಡಿದ್ದು, ಆಳವಾದ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಇದರಿಂದ ತಮಿಳುನಾಡಿನಲ್ಲಿ ಹೆಚ್ಚಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಮಧ್ಯಾಹ್ನದ ವೇಳೆಗೆ ದಿತ್ವಾ ಚಂಡಮಾರುತ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯಲ್ಲಿ ಉತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ. ಇದರಿಂದಾಗಿ ಬಿರುಗಾಳಿ ಮತ್ತಷ್ಟು ದುರ್ಬಲವಾಗಲಿದೆ ಎನ್ನಲಾಗಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತದಿಂದಾಗಿ ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರಕ್ಕೆ ಸಾಗುತ್ತಲಿದೆ. ಇದು ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ವಾಯುಭಾರ ಕುಸಿತದ ಕೇಂದ್ರವು ಮುಂಜಾನೆ ೨ ಗಂಟೆಗೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯಿಂದ ಸುಮಾರು 50 ಕಿ.ಮೀ ದೂರದಲ್ಲಿತ್ತು. ಹೀಗಾಗಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಿತ್ವಾ ಚಂಡಮಾರುತವು ನೈಋತ್ಯ ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡು ಆಳವಾದ ವಾಯುಭಾರ ಕುಸಿತಕ್ಕೆ ಒಳಗಾಗಿದೆ. ಕಳೆದ 6 ಗಂಟೆಗಳಲ್ಲಿ ಗಂಟೆಗೆ 10 ಕಿ.ಮೀ ವೇಗದಲ್ಲಿದ್ದ ಚಂಡಮಾರುತ ಉತ್ತರಕ್ಕೆ ಚಲಿಸಿ ಭಾನುವಾರ ರಾತ್ರಿ 11.30ರವರೆಗೆ ಅದೇ ಪ್ರದೇಶದಲ್ಲಿತ್ತು. ಚೆನ್ನೈ ನಿಂದ ಸುಮಾರು 90 ಕಿ.ಮೀ ಆಗ್ನೇಯಕ್ಕೆ, ಪುದುಚೇರಿಯಿಂದ 90 ಕಿ.ಮೀ ಪೂರ್ವ ಮತ್ತು ಆಗ್ನೇಯದಲ್ಲಿ, ಕಡಲೂರಿನಿಂದ 110 ಕಿ.ಮೀ ಪೂರ್ವ ಮತ್ತು ಈಶಾನ್ಯದಲ್ಲಿ ಕಾರೈಕಲ್ ನಿಂದ 180 ಕಿ.ಮೀ ಈಶಾನ್ಯದಲ್ಲಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

