Tuesday, December 2, 2025

EPFO ಹಗರಣದಲ್ಲಿ ಸ್ಫೋಟಕ ಸತ್ಯ ಬಯಲು: ಸಿಐಡಿಗೆ ತಲೆನೋವಾದ ‘ಪರದೇಶಿ’ ಹೂಡಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಪಿಎಫ್‌ಒ ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರತಿ ಹಂತದಲ್ಲೂ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಆರೋಪಿಗಳು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹಾಗೂ ವಂಚಿಸಿದ ಹಣವನ್ನು ಸರ್ಕಾರಕ್ಕೆ ಮರಳಿ ಸಿಗದಂತೆ ಮಾಡಲು ಸಿನಿಮಾ ಶೈಲಿಯಲ್ಲಿ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದರು ಎಂಬುದು ತನಿಖೆ ವೇಳೆ ದೃಢಪಟ್ಟಿದೆ.

ವಿದೇಶದಲ್ಲಿ ಹೂಡಿಕೆ: ರಿಕವರಿ ತಪ್ಪಿಸಲು ಮಾಸ್ಟರ್ ಪ್ಲಾನ್

ತನಿಖೆ ವೇಳೆ ಸಿಐಡಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ಪ್ರಮುಖ ಆರೋಪಿ ಜಗದೀಶ್, ವಂಚನೆಯ ಹಣವನ್ನು ಭಾರತದಿಂದ ಹೊರ ದೇಶಗಳಲ್ಲಿ ಹೂಡಿಕೆ ಮಾಡಿರುವುದು ತಿಳಿದುಬಂದಿದೆ. ಅಧಿಕಾರಿಗಳು ಹಣವನ್ನು ಮರಳಿ ವಶಪಡಿಸಿಕೊಳ್ಳಲು ಸಾಧ್ಯವಾಗದಂತೆ, ತಾಂತ್ರಿಕ ಮತ್ತು ಕಾನೂನು ಸಮಸ್ಯೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಈತ ದುಬೈನ ರೆಸ್ಟೋರೆಂಟ್‌ಗಳು, ರೇಸ್ ಕೋರ್ಸ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾನೆ. ಹೊರದೇಶಗಳಲ್ಲಿನ ಈ ಹೂಡಿಕೆಗಳನ್ನು ರಿಕವರಿ ಮಾಡುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ.

ಈ ವಂಚಕರು ತಮ್ಮ ಜಾಲಕ್ಕೆ ಬಂಡವಾಳವನ್ನಾಗಿ ಬಳಸಿಕೊಂಡಿದ್ದು ಯಾರ ಹಣವನ್ನು ಗೊತ್ತೇ? ಬಡವರು, ಅಂಗವಿಕಲರು ಮತ್ತು ವೃದ್ಧೆಯರ ಸಣ್ಣ ಉಳಿತಾಯದ ಹಣವನ್ನೇ ಜಗದೀಶ್ ಕೋಟಿ ಕೋಟಿ ಲೂಟಿ ಮಾಡಲು ಬಂಡವಾಳವಾಗಿಸಿಕೊಂಡಿದ್ದಾನೆ.

ಆರೋಪಿಗಳು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಮಲ್ಲೇಶ್ವರ ಡಿಸಿಸಿ ಬ್ಯಾಂಕ್‌ಗೆ ಡೆಪಾಸಿಟ್ ಮಾಡಿದ್ದಾರೆ. ಅಲ್ಲಿಂದ ಚೆಕ್ ಮೂಲಕ ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಅಂತಿಮವಾಗಿ ವಿದೇಶಗಳಲ್ಲಿರುವ ಖಾತೆಗಳಿಗೆ ಹಣ ರವಾನಿಸಿರುವುದು ಬೆಳಕಿಗೆ ಬಂದಿದೆ.

ಇನ್ನು, ಜಗದೀಶ್ ಕಂಪನಿಯ ಖಾಯಂ ನೌಕರನಲ್ಲ. ಬದಲಿಗೆ, ಈತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಈ ಅಂಶ ಕೂಡ ಆತನ ಬಂಧನ ಮತ್ತು ಮುಂದಿನ ಕಾನೂನು ಕ್ರಮಗಳಿಗೆ ಕೆಲವು ತಾಂತ್ರಿಕ ತೊಡಕುಗಳನ್ನು ತಂದೊಡ್ಡಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

error: Content is protected !!