ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನುಮ ಹುಟ್ಟಿದ ನಾಡಲ್ಲಿ ಹನುಮಮಾಲೆ ವಿಸರ್ಜನೆ ನಡೆಯಲಿದ್ದು, ಅಂಜನಾದ್ರಿ ಬೆಟ್ಟ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಇಂದು (ಡಿ.2) ಮತ್ತು ನಾಳೆ (ಡಿ.3) ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮವಿದ್ದು, ಈಗಾಗಲೇ ಸಾವಿರಾರು ಭಕ್ತರು ಹರಿದು ಬರುತ್ತಿದ್ದಾರೆ. ಜಿಲ್ಲಾಡಳಿತವು ಈಗಾಗಲೇ ಹನುಮ ಮಾಲೆ ವಿಸರ್ಜನೆಗೆ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ.
ಇಂದಿನಿಂದಲೇ ಅಂಜನಾದ್ರಿಗೆ ಹನುಮ ಭಕ್ತರು ಹರಿದು ಬರುತ್ತಿದ್ದು, ಸುಮಾರು ಒಂದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲಾಡಳಿತ ಬರುವ ಭಕ್ತರಿಗಾಗಿ ವಸತಿ, ಶೌಚಾಲಯ, ಊಟ ಎಲ್ಲವನ್ನು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಡಳಿತದ ಜೊತೆಗೆ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಕೂಡ ಕೈ ಜೋಡಿಸಿದೆ. ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರೋ ಭಕ್ತರಿಗೆ ಸುಮಾರು ಎಂಟು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಇನ್ನು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಹುಟ್ಟಿರೋದಕ್ಕೆ ಕೆಲ ಕುರುಹಗಳು ಲಭ್ಯವಾಗಿವೆ. ಹನುಮ ಮಾಲೆ ಮೊದಲು ಆರಂಭವಾಗಿದ್ದು ಕೆಲ ಭಕ್ತರಿಂದ. ಇದೀಗ ಅದು ಲಕ್ಷಾಂತರ ಭಕ್ತರನ್ನು ತಲುಪಿದೆ. ಕೇವಲ 13 ಜನರಿಂದ ಆರಂಭವಾದ ಹುನಮಮಾಲೆ ವೃತವನ್ನ ಇಂದು ಲಕ್ಷ-ಲಕ್ಷ ಮಂದಿ ಆಚರಣೆ ಮಾಡ್ತಾರೆ.
ಕಟ್ಟುನಿಟ್ಟಿನ ವೃತ ಮಾಡೋದರ ಮೂಲಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬಂದು ಮಾಲೆಯನ್ನ ವಿಸರ್ಜನೆ ಮಾಡ್ತಾರೆ. ಕೆಲವರು 45 ದಿನ, ಕೆಲವರು ಒಂದು ತಿಂಗಳು, ಕೆಲವರು 15 ದಿನ, 9 ದಿನ, ಮೂರು ದಿನ ಮಾಲೆ ಧರಿಸೋ ಪ್ರತೀತಿ ಇದೆ. ನಾಳೆ ಸಾಗರೋಪಾದಿಯಲ್ಲಿ ಹನುಮ ಮಾಲಾಧಾರಿಗಳು ಬರೋ ಹಿನ್ನೆಲೆ ಈಗಾಗಲೇ ಪೊಲೀಸರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕೊಪ್ಪಳದಿಂದ ಅಂಜನಾದ್ರಿಬೆಟ್ಟದವರೆಗೂ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಮಾಡಲು ತಯಾರಿ ನಡೆಸಿದ್ದಾರೆ.
ಇಂದು ಹನುಮಮಾಲೆ ವಿಸರ್ಜನೆ : ಮದುವಣಗಿತ್ತಿಯಂತೆ ತಯಾರಾದ ಅಂಜನಾದ್ರಿ ಬೆಟ್ಟ

