Tuesday, December 2, 2025

‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯ ಯಾಕೆ? ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನುಮುಂದೆ ಎಲ್ಲಾ ಹೊಸ ಮೊಬೈಲ್ ಫೋನ್​ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವಂತೆ ದೂರಸಂಪರ್ಕ ಇಲಾಖೆ ಮೊಬೈಲ್ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಈಗ, ದೇಶದಲ್ಲಿ ತಯಾರಿಸಲಾಗುತ್ತಿರುವ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಸುವುದು ಕಡ್ಡಾಯವಾಗಿದೆ.

ಈ ಆ್ಯಪ್ ಯಾಕೆ ನಮ್ಮ ಫೋನ್‌ನಲ್ಲಿ ಇರಬೇಕು? ಇದರಿಂದ ಏನು ಉಪಯೋಗ? ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ..

ಸಂಚಾರ್ ಸಾಥಿ ಅಪ್ಲಿಕೇಶನ್ ಮೊಬೈಲ್ ಭದ್ರತಾ ಸಮಸ್ಯೆಗಳನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ಬಳಸಿ, ನೀವು ನಿಮ್ಮ ಮೊಬೈಲ್‌ನ IMEI ಸಂಖ್ಯೆಯನ್ನು ಪರಿಶೀಲಿಸಬಹುದು. IMEI ಗೆ ಸಂಬಂಧಿಸಿದ ಯಾವುದೇ ವಂಚನೆಯನ್ನು ನೀವು ವರದಿ ಮಾಡಬಹುದು. ಅಪ್ಲಿಕೇಶನ್ ಬಳಸಿ ಕಳೆದುಹೋದ ಅಥವಾ ಕದ್ದ ಫೋನ್ ಅನ್ನು ಸಹ ನೀವು ವರದಿ ಮಾಡಬಹುದು.

ಐಎಂಇಐ ಸಂಖ್ಯೆಯನ್ನು ನಕಲು ಮಾಡಿಕೊಂಡು ಬೇರೆ ದೇಶದಲ್ಲಿ ಕೂತು ಸೈಬರ್‌ ಅಪರಾಧ ಬ್ಯಾಂಕ್‌ ಖಾತೆ ಬಳಿಕೆ ಸೇರಿದಂತೆ ಹಲವು ಅಕ್ರಮ ಎಸಗಲಾಗುತ್ತದೆ. ಮೊಬೈಲ್‌ ಖರೀದಿಸುವವರು ಖರೀದಿಗೂ ಮುನ್ನ ಈ ಆ್ಯಪ್‌ ಮೂಲಕ ತಾವು ಖರೀದಿಸುವ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬಹುದು.ತಮ್ಮ ಆಧಾರ್‌ ಕಾರ್ಡ್‌ ಅಥವಾ ಪಾಸ್‌ಪೋರ್ಟ್‌ ಬಳಸಿಕೊಂಡು ಅಕ್ರಮವಾಗಿ ಸಿಮ್‌ ಖರೀದಿ ಮಾಡಲಾಗಿದ್ದರೆ ಈ ಆ್ಯಪ್‌ ಮೂಲಕ ಅಂಥ ಅಕ್ರಮ ಸಂಪರ್ಕವನ್ನು ನಿಷ್ಕ್ರಿಯ ಮಾಡಬಹುದು.

ಈ ಆದೇಶವನ್ನು ಪಾಲಿಸಲಿದ್ದರೆ ದೂರಸಂಪರ್ಕ ಕಾಯ್ದೆ –2023 ಮತ್ತು ದೂರಸಂಪರ್ಕ ಸೈಬರ್‌ ಭದ್ರತಾ ನಿಯಮಗಳು – 2024 ಮತ್ತು ಇತರೆ ಕಾಯ್ದೆಗಳ ಅನ್ವಯ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

ಈಗಾಗಲೇ ತಯಾರಿಸಲಾದ ಅಥವಾ ಪ್ರಸ್ತುತ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಮೊಬೈಲ್ ಫೋನ್‌ಗಳು ಸಹ ಈ ಅಪ್ಲಿಕೇಶನ್ ಅನ್ನು ಸೇರಿಸಬೇಕಾಗುತ್ತದೆ. ಕಂಪನಿಗಳು ಸಾಫ್ಟ್‌ವೇರ್ ನವೀಕರಣಗಳ ಮೂಲಕ ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ.

ತಯಾರಕರು ಮತ್ತು ಆಮದುದಾರರು ಈ ಆದೇಶವನ್ನು ಪಾಲಿಸಬೇಕು ಮತ್ತು 120 ದಿನಗಳಲ್ಲಿ ದೂರಸಂಪರ್ಕ ಇಲಾಖೆಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಸಂಚಾರ್ ಸಾಥಿ ವೆಬ್‌ಸೈಟ್ ಪ್ರಕಾರ ಇಲ್ಲಿಯವರೆಗೆ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ.

error: Content is protected !!