ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಕ್ರೈಮ್ ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಿಗೆ ಹೊಸ ನಿಯಮವೊಂದನ್ನು ರೂಪಿಸಿದೆ.
ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ಚಾಟ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ತಮ್ಮ ಬಳಕೆದಾರರ ಸಿಮ್ ಕಾರ್ಡ್ ಸಕ್ರಿಯವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು, ಮತ್ತು ಸಾಧನಗಳಿಗೆ ಸಿಮ್ ಕಾರ್ಡ್ ನಿರಂತವಾಗಿ ಜೋಡಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ದೂರಸಂಪರ್ಕ ಇಲಾಖೆಯು ನಿರ್ದೇಶನ ನೀಡಿದೆ. 2025ರ ಟೆಲಿಕಮ್ಯೂನಿಕೇಶನ್ ಸೈಬರ್ ಸೆಕ್ಯೂರಿಟಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಹೊಸ ನಿಯಮವನ್ನು ತರಲಾಗಿದೆ.
ಈ ನಿಯಮದ ಪ್ರಕಾರ, ಬ್ಯಾಂಕ್, ಯುಪಿಐ ಇತ್ಯಾದಿ ಆ್ಯಪ್ಗಳ ರೀತಿಯಲ್ಲಿ ಮೆಸೇಜಿಂಗ್ ಆ್ಯಪ್ಗಳೂ ಕೂಡ ಬಳಕೆದಾರರ ಸಿಮ್ ಕಾರ್ಡ್ಗಳನ್ನು ಪ್ರತೀ 90 ದಿನಗಳಿಗೊಮ್ಮೆ ವೆರಿಫೈ ಮಾಡಬೇಕಾಗುತ್ತದೆ.
ಮೊಬೈಲ್ನಲ್ಲಿ ಆ್ಯಕ್ಟಿವ್ ಆಗಿರುವ ಸಿಮ್ ಇದ್ದರೆ ಮಾತ್ರ ಮೆಸೇಜಿಂಗ್ ಸರ್ವಿಸಸ್ ನೀಡಬೇಕು. ಉದಾಹರಣೆಗೆ, ಒಂದು ಸಾಧನದಲ್ಲಿ ವಾಟ್ಸಾಪ್ ವೆಬ್ ಅನ್ನು ಆಕ್ಟಿವ್ ಮಾಡಿದಾಗ, ಮೊಬೈಲ್ ಇಲ್ಲದಿದ್ದರೂ ಆ ಸಾಧನದಲ್ಲಿ ವಾಟ್ಸಾಪ್ ಸರ್ವಿಸ್ ಚಾಲನೆಯಲ್ಲಿ ಇರುತ್ತದೆ. ಇದರಿಂದ ಸೈಬರ್ ಕ್ರಿಮಿನಲ್ಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಹೊಸ ನಿಯಮದ ಪ್ರಕಾರ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ, ಪ್ರತೀ ಆರು ಗಂಟೆಗಳಿಗೊಮ್ಮೆ ಬ್ರೌಸರ್ನಲ್ಲಿ ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಸರ್ವಿಸ್ ಲಾಗೌಟ್ ಆಗುತ್ತದೆ. ಆ್ಯಕ್ಟಿವ್ ಮೊಬೈಲ್ ಬಳಸಿ ಮತ್ತೆ ಲಿಂಕ್ ಮಾಡಬೇಕಾಗುತ್ತದೆ.
ದೂರಸಂಪರ್ಕ ಇಲಾಖೆ ಮಾಡಿರುವ ಈ ಹೊಸ ಕಾನೂನಿಂದ ವಾಟ್ಸಾಪ್ನಂತಹ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳನ್ನು ಟೆಲಿಕಮ್ಯೂನಿಕೇಶನ್ ಐಡೆಂಟಿಫಯರ್ ಯೂಸರ್ ಎಂಟಿಟೀಸ್ (ಟಿಐಯುಇ) ಎದು ಅಧಿಕೃತವಾಗಿ ವರ್ಗೀಕರಿಸಿದಂತಾಗುತ್ತದೆ. ಒಂದು ರೀತಿಯಲ್ಲಿ ವಾಟ್ಸಾಪ್ ಇತ್ಯಾದಿ ಮೆಸೇಜಿಂಗ್ ಆ್ಯಪ್ಗಳನ್ನು ಸಾಂಪ್ರದಾಯಿಕ ಟೆಲಿಕಾಂ ಆಪರೇಟರ್ಗಳ ರೀತಿ ಪರಿಗಣಿಸಲಾಗುತ್ತದೆ.

