Tuesday, December 2, 2025

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ರೂಲ್ಸ್ ಜಾರಿ: ನಿಯಮ ಮೀರಿದ್ರೆ ದಂಡಾಸ್ತ್ರ ಪ್ರಯೋಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು ಮತ್ತು ಒಟ್ಟಾರೆ ಅನುಕೂಲತೆಯನ್ನು ಸುಧಾರಿಸಲು ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಡಿಸೆಂಬರ್ 8, 2025ರಿಂದ ಜಾರಿಗೆ ಬರಲಿವೆ.

ವಿಮಾನ ನಿಲ್ದಾಣ ಭಾರತದ 3ನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1,30,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಈ ಹಿನ್ನಲೆ ಸುಮಾರು 1 ಲಕ್ಷ ವಾಹನಗಳು ಪ್ರತಿದಿನ ಏರ್​​ಪೋರ್ಟ್​​ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಇದರಿಂದ ವಿಶೇಷವಾಗಿ ಟರ್ಮಿನಲ್‌ಗಳ ಮುಂಭಾಗ ಇರುವ ಕರ್ಬ್‌ಸೈಡ್‌ನಲ್ಲಿ (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಪ್ರಯಾಣಿಕರ ಅನುಕೂಲ, ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿ ಖಾಸಗಿ ಕಾರುಗಳು ಮತ್ತು ಕ್ಯಾಬ್‌ಗಳ ದೀರ್ಘಕಾಲದ ಕಾಯುವಿಕೆಯಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿದೆ. ಹೀಗಾಗಿ ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಪ್ರತ್ಯೇಕ ಪಥ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಇದು ಕರ್ಬ್‌ಸೈಡ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಜೊತೆಗೆ, ಟರ್ಮಿನಲ್‌ಗಳ ಮುಂದೆ ಪಿಕ್-ಅಪ್ ವಲಯದ ದುರುಪಯೋಗ ತಡೆಯಲೂ ನೆರೆವಾಗಲಿದೆ.

ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟರ್ಮಿನಲ್​​ 1 ಮತ್ತು ಟರ್ಮಿನಲ್​​ 2ರಲ್ಲಿ ನಿಗದಿಪಡಿಸಿದ ಪಿಕ್-ಅಪ್ ವಲಯಕ್ಕೆ ಆಗಮಿಸುವ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ. ವಾಹನ‌ ನಿಲುಗಡೆಗೆ 8 ನಿಮಿಷಗಳ ಕಾಲ ಅವಕಾಶ ಸಿಗಲಿದ್ದು, ಸಮಯ ಮಿತಿ ಮೀರಿದರೆ ಅಂತಹ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತದೆ.

ಶುಲ್ಕ ಎಷ್ಟು?
8-13 ನಿಮಿಷಗಳ ಕಾಲ 150 ರೂ.
13-18 ನಿಮಿಷಗಳಿಗೆ 300 ರೂ.

18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್‌

ಇನ್ನು ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕು. ಸುಗಮ ಪಿಕ್-ಅಪ್ ಅನುಭವವನ್ನು ಒದಗಿಸಲು, ಪಾರ್ಕಿಂಗ್‌ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತವೆ. ಟರ್ಮಿನಲ್ 1ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು ಪಿ3 ಮತ್ತು ಪಿ4 ಪಾರ್ಕಿಂಗ್ ವಲಯಗಳಿಗೆ ತೆರಳಬೇಕು. ಟರ್ಮಿನಲ್ 2ಗೆ ಸೇವೆ ಸಲ್ಲಿಸುವ ವಾಹನಗಳು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಈ ಕ್ರಮದಿಂದ ಪ್ರಯಾಣಿಕರ ಸುರಕ್ಷತೆ, ಸುಗಮ ಆಗಮನ ಹಾಗೂ ನಿರ್ಗಮನಕ್ಕೆ ಸಹಕಾರಿಯಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್‌) ಎಂ.ಡಿ. ಮತ್ತು ಸಿಇಒ ಹರಿ ಮರಾರ್ ತಿಳಿಸಿದ್ದಾರೆ.

error: Content is protected !!