ಹೊಸ ದಿಗಂತ ವರದಿ, ಬೀದರ್:
ಅತಿವೃಷ್ಟಿ ಪರಿಹಾರ ಹಣ ಬಿಡುಗಡೆಯಲ್ಲಿ ವಿಳಂಬ, ಕಬ್ಬಿನ ಬೆಂಬಲ ಬೆಲೆಯಲ್ಲಿ ಕಡಿತ, ವಿದ್ಯಾನಿಧಿ ಬಂದ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಬೀದರ್ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ಟ್ರ್ಯಾಕ್ಟರ್ ಗೆ ಕಬ್ಬು ಕಟ್ಟಿ ರೈತರೊಂದಿಗೆ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ಗಂಜ್ ನಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು ಮಾರ್ಗ ಮಧ್ಯೆ ಜಿಲ್ಲೆಯಿಂದ ರಾಜ್ಯ ಸರ್ಕಾರದಲ್ಲಿ ಇಬ್ಬರು ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಸುಟ್ಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಅತಿವೃಷ್ಟಿ ಬೆಳೆ ಪರಿಹಾರ ಒಂದು ವಾರದ ಒಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರದು ದರ್ಪ, ಅಹಂಕಾರ ಹೆಚ್ಚಾಗಿದ್ದು ಅತಿವೃಷ್ಟಿ ಪರಿಹಾರ ಕೋರಿ ಮನವಿ ಸಲ್ಲಿಸಲು ಹೋದ ರೈತರಿಗೆ ಕಛೇರಿ ಒಳಗೆ ಬರದಂತೆ ತಡೆದದ್ದು ಎಷ್ಟು ಸರಿ? ಪರಿಹಾರದ ಧನ ರೈತರ ಹಕ್ಕು ಕೇಂದ್ರ ಸರ್ಕಾರ ಈಗಾಗಲೇ ಪರಿಹಾರದ ಹಣ ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿದೆ, ಬಡ್ಡಿ ಹಣ ತಿನ್ನಲು ರೈತರ ಪರಿಹಾರದ ಹಣ ಡಿಸಿಸಿ ಬ್ಯಾಂಕ್ ನಲ್ಲಿ ಇಡುವುದನ್ನು ಬಿಟ್ಟು ಸಂಕಷ್ಟದಲ್ಲಿರುವ ರೈತರಿಗೆ ಅವರ ಹಕ್ಕಿನ ಅತಿವೃಷ್ಟಿ ಪರಿಹಾರದ ಹಣ ಒಂದು ವಾರದ ಒಳಗೆ ಬಿಡುಗಡೆ ಮಾಡಿದೆ ಇದ್ದರೆ ಜಿಲ್ಲೆಯಾದ್ಯಂತ ರೈತರೆಲ್ಲರೂ ಸೇರಿಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಬ್ಬಿನ ಬೆಂಬಲ ಬೆಲೆ ವಿಚಾರದಲ್ಲಿಯೂ ರೈತರಿಗೆ ಅನ್ಯಾಯ ಆಗಿದೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಾವು ನಮ್ಮದೇ ಜಿಲ್ಲೆಯ ರೈತರ ಹಿತ ಕಾಪಾಡಲು ಆಗದಿದ್ದರೆ ರಾಜ್ಯ ಮಟ್ಟದ ಸಚಿವರಾಗಿ ಏನು ಪ್ರಯೋಜನ? ನೆರೆಯ ಕಲಬುರ್ಗಿ ಜಿಲ್ಲೆಯಲ್ಲಿ ಕಬ್ಬಿಗೆ ₹೩೧೬೫ ಬೆಲೆ ನಿಗದಿಪಡಿಸಲಾಗಿದೆ, ಆದರೆ ಇಳುವರಿ ರಿಕವರಿ ರೇಟ್ ಹೆಚ್ಚಿರುವ ನಮ್ಮ ಜಿಲ್ಲೆಯ ರೈತರ ಹಿತ ಕಾಯುವಲ್ಲಿ ತಾವು ವಿಫಲರಾಗಿದ್ದೀರಿ ಮುಂಬರುವ ದಿನಗಳಲ್ಲಿ ಕಬ್ಬಿನ ಬೆಂಬಲ ಬೆಲೆ ಹೆಚ್ಚಳ ಆಗಿದೆ ಇದ್ದರೆ ರೈತರಿಗೆ ನ್ಯಾಯ ಒದಗಿಸಲು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕಲಬುರ್ಗಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಾಧವರಾವ ಹಸೂರೆ, ಬಿಜೆಪಿ ನಗರ ಅಧ್ಯಕ್ಷ ಶಶಿ ಹೊಸಳ್ಳಿ, ಬಿಜೆಪಿ ರೈತ ಮೊರ್ಚಾ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

