ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಗೆ ತೆಲಂಗಾಣ ರಾಜ್ಯದ ಕೆಲ ಮಂತ್ರಿಗಳು, ಸಚಿವರು, ರಾಜಕೀಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ತೆಲಂಗಾಣ ಜನತೆಯ ಕ್ಷಮೆ ಕೇಳದೇ ಹೋದಲ್ಲಿ, ಪವನ್ ಕಲ್ಯಾಣ್ ಸಿನಿಮಾಗಳನ್ನು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಮಾತ್ರವಲ್ಲದೆ, ತೆಲಂಗಾಣದಾದ್ಯಂತ ಪ್ರತಿಭಟನೆ ಮಾಡುವುದಾಗಿಯೂ ಹೇಳಿದ್ದಾರೆ.
ಅಷ್ಟಕ್ಕೂ ಪವನ್ ಕಲ್ಯಾಣ್ ಹೇಳಿದ್ದೇನು….ಆಂಧ್ರ ಡಿಸಿಎಂ ಆಗಿರುವ ಜೊತೆಗೆ ಆಂಧ್ರ ಪ್ರದೇಶದ ಅರಣ್ಯ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿರುವ ಪವನ್ ಕಲ್ಯಾಣ್ ಇತ್ತೀಚೆಗಷ್ಟೆ ಆಂಧ್ರ ಪ್ರದೇಶದ ಕೋನಸಿಮ ಜಿಲ್ಲೆಗೆ ಭೇಟಿ ನೀಡಿದ್ದರು. ಇದೊಂದು ಸರ್ಕಾರಿ ಭೇಟಿ ಆಗಿತ್ತು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಪವನ್ ಕಲ್ಯಾಣ್, ಕೋನಸೀಮ ಜಿಲ್ಲೆಯಲ್ಲಿ ಬೆಳೆ ನಷ್ಟವಾಗಲು, ಹಸಿರು ನಷ್ಟವಾಗಲು ತೆಲಂಗಾಣ ಜನರ ಕೆಟ್ಟ ದೃಷ್ಟಿ ಕಾರಣ ಎಂದಿದ್ದರು. ಪವನ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
‘ಕೋನಸೀಮ ಹಚ್ಚ ಹಸಿರಿನ ಬೀಡಾಗಿತ್ತು. ಇಲ್ಲಿ ತೆಂಗಿನ ಕೃಷಿ ಅದ್ಭುತವಾಗಿತ್ತು. ತೆಂಗು ಬೆಳೆದುಕೊಂಡು ನೆಮ್ಮದಿಯಿಂದ ಇದ್ದರು ಇಲ್ಲಿಯ ಜನ. ಎರಡು ರಾಜ್ಯಗಳು ಬೇರೆ ಆಗಲು ಸಹ ಇಲ್ಲಿನ ಹಚ್ಚ ಹಸಿರು, ಸಮೃದ್ಧ ಕೃಷಿಯೇ ಕಾರಣವಾಯ್ತು. ಅದರಂತೆ ಇಲ್ಲಿನ ತೆಂಗು ಬೆಳೆ ತೆಲಂಗಾಣ ಜನ, ನಾಯಕರ ಕಣ್ಣು ಕುಕ್ಕಿತು. ಅವರ ಕೆಟ್ಟ ದೃಷ್ಟಿ ಬಿದ್ದು ತೆಂಗು ಕೃಷಿ ಎಂಬುದೇ ಇಲ್ಲವಾಗಿದೆ. ಇಲ್ಲಿನ ಹಸಿರು ಸಹ ಮಾಯ ಆಗಿಬಿಟ್ಟಿದೆ’ ಎಂದು ಪವನ್ ಕಲ್ಯಾಣ್ ಹೇಳಿದ್ದರು.
ಪವನ್ ಹೇಳಿಕೆಗೆ ತೆಲಂಗಾಣದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಆಡಿತಾರೂಢ ಕಾಂಗ್ರೆಸ್, ವಿಪಕ್ಷವಾದ ಬಿಆರ್ಎಸ್ ಇನ್ನೂ ಕೆಲವು ರಾಜಕೀಯ ಪಕ್ಷಗಳು ಪವನ್ ಕಲ್ಯಾಣ್ ಹೇಳಿಕೆಯನ್ನು ಖಂಡಿಸಿದ್ದು, ಕ್ಷಮೆಗೆ ಆಗ್ರಹಿಸಿವೆ.
ಹಾಲಿ ಸಿನಿಮಾಟೊಗ್ರಫಿ ಸಚಿವ ಕೊಮಟಿ ರೆಡ್ಡಿ ಮಾತನಾಡಿ, ‘ಪವನ್ ಕಲ್ಯಾಣ್ ಅವರು ತೆಲಂಗಾಣ ಜನರ ಬಳಿ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವಾದರೆ ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.
ಸಚಿವ ಕೊಮಟಿ ರೆಡ್ಡಿ, ‘ಪವನ್ ಅವರ ಸಹೋದರ ಚಿರಂಜೀವಿ ಅದ್ಭುತವಾದ ವ್ಯಕ್ತಿ, ಅವರಾದರೂ ಸಹೋದರನಿಗೆ ಬುದ್ಧಿ ಹೇಳಬೇಕು’ ಎಂದಿದ್ದಾರೆ.

