ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಯಶಸ್ಸಿನ ಹೆಜ್ಜೆ ಗುರುತು ಮೂಡಿಸಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಒಟಿಟಿ ಪ್ರೇಕ್ಷಕರಿಗೂ ಡಬಲ್ ಖುಷಿ ನೀಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕಾ ಅಭಿನಯದ ಎರಡು ವಿಭಿನ್ನ ಸ್ವರೂಪದ ಸಿನಿಮಾಗಳು ಈ ವಾರ ಡಿಜಿಟಲ್ ವೇದಿಕೆಯಲ್ಲಿ ಒಟ್ಟಿಗೆ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ತೆರೆಕಂಡ ‘ಥಮ್ಮಾ’ ಚಿತ್ರವು ಯಾವುದೇ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದಂತೆ ಒಟಿಟಿಗೆ ಆಗಮಿಸಿದೆ. ಈ ಸಾಹಸ ಹಾರರ್ ಥ್ರಿಲ್ಲರ್‌ನಲ್ಲಿ ಪತ್ರಕರ್ತ ಅಲೋಕ್ ಗೋಯಲ್ ಪಾತ್ರದಲ್ಲಿ ಅಯುಷ್ಮಾನ್ ಖುರಾನಾ ಕಾಣಿಸಿಕೊಂಡರೆ, ನಾಯಕಿಯಾಗಿ ರಶ್ಮಿಕಾ ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ನವಾಝುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಕಂಡ ಈ ಸಿನಿಮಾ ಇದೀಗ Amazon Prime Videoನಲ್ಲಿ ರೆಂಟ್ ಆಧಾರದಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ಡಿಸೆಂಬರ್ 16 ನಂತರ ಎಲ್ಲಾ ಚಂದಾದಾರರಿಗೆ ಸಿಗುವ ಸಾಧ್ಯತೆಯಿದೆ.
ಇದೊಂದೇ ಅಲ್ಲ. ರಶ್ಮಿಕಾ ಅಭಿನಯದ ಇತ್ತೀಚಿನ ರೊಮ್ಯಾಂಟಿಕ್ ಡ್ರಾಮಾ ‘The Girlfriend’ ಕೂಡ ಈ ಶುಕ್ರವಾರದಿಂದ Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಸ್ಪಂದನೆ ಪಡೆದುಕೊಂಡಿತ್ತು. ಒಂದೇ ವಾರದಲ್ಲಿ ಎರಡು ವಿಭಿನ್ನ ಶೈಲಿಯ ಚಿತ್ರಗಳು ಒಟಿಟಿಗೆ ಬಂದಿರುವುದು ರಶ್ಮಿಕಾ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

