Wednesday, December 3, 2025

ಬಿಹೆಚ್​​ಯು ಕ್ಯಾಂಪಸ್‌ನಲ್ಲಿ ಹಿಂಸಾಚಾರ: ಪೊಲೀಸರಿಂದ ಲಾಠಿ ಚಾರ್ಜ್​​! ಅಸಲಿಗೆ ಆಗಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮಂಗಳವಾರ ತಡರಾತ್ರಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ತೀವ್ರ ಉದ್ವಿಗ್ನತೆ ನಿರ್ಮಾಣವಾಗಿ ಕಲ್ಲುತೂರಾಟ ಹಾಗೂ ಪೊಲೀಸ್ ಲಾಠಿಚಾರ್ಜ್ ನಡೆದ ಘಟನೆ ಸಂಚಲನ ಮೂಡಿಸಿದೆ.

ರಾಜಾರಾಮ್ ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಯ ಕಾರು ಮತ್ತೊಬ್ಬ ವಿದ್ಯಾರ್ಥಿಗೆ ಡಿಕ್ಕಿಯಾದ ಸಣ್ಣ ವಿವಾದವೇ ನಂತರ ದೊಡ್ಡ ಗಲಾಟೆಗೆ ಕಾರಣವಾಯಿತು. ಪ್ರೊಕ್ಟೋರಿಯಲ್ ಮಂಡಳಿಯ ಕಚೇರಿ ಮುಂದೆ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದ್ದು, ಭದ್ರತಾ ಸಿಬ್ಬಂದಿಗಳೊಂದಿಗೆ ವಾಗ್ವಾದ ತೀವ್ರಗೊಂಡಿತು. ಬಳಿಕ ಬಿರ್ಲಾ ಚೌಕದಿಂದ ಎಲ್‌ಡಿ ಅತಿಥಿಗೃಹದವರೆಗೆ ರ್ಯಾಲಿ ನಡೆಸಿದ ವಿದ್ಯಾರ್ಥಿಗಳ ಗುಂಪು ಕಲ್ಲುತೂರಾಟ ಆರಂಭಿಸಿತು. ಈ ವೇಳೆ ರಸ್ತೆಬದಿಯಲ್ಲಿ ನಿಲುಗಡೆ ಮಾಡಿದ್ದ ಹಲವು ವಾಹನಗಳ ಗಾಜುಗಳು ಪುಡಿಪುಡಿಯಾಗಿ ಹಾನಿಗೊಳಗಾದವು.

ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪೊಲೀಸರನ್ನು ಕರೆಸಿದ್ದು, ಭೇಲುಪುರ ಎಸಿಪಿ ನೇತೃತ್ವದಲ್ಲಿ ಲಾಠಿಚಾರ್ಜ್ ನಡೆಸಿ ಉದ್ವಿಗ್ನತೆಯನ್ನು ನಿಯಂತ್ರಿಸಲಾಯಿತು. ಈ ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

error: Content is protected !!