ಹೊಸದಿಗಂತ ವರದಿ ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ಭಾರೀ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಕಬ್ಬು ಹೊತ್ತೊಯ್ಯುತ್ತಿದ್ದ ಎರಡು ಟ್ರಾಲಿಗಳನ್ನು ಹೊಂದಿರುವ ಟ್ರ್ಯಾಕ್ಟರ್ ವೇಗವನ್ನು ನಿಧಾನಗೊಳಿಸಿದ ವೇಳೆ, ಹಿಂಬದಿಯಿಂದ ಬರುತ್ತಿದ್ದ ಟಾಟಾ ಎಟಿಒಸ್ ಕಾರು ಟ್ರಾಲಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಟ್ರಾಲಿಗೆ ರಿಫ್ಲೆಕ್ಟರ್‌ಗಳು ಹಾಗೂ ಗುರುತುಗಳು (markings) ಅಳವಡಿಸಲಾಗಿದ್ದರೂ, ಕಾರು ಅತ್ಯಧಿಕ ವೇಗದಲ್ಲಿದ್ದು ಸಮಯಕ್ಕೆ ನಿಧಾನಗೊಳ್ಳದೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಭಾಗಶಃ ಟ್ರಾಲಿಯಡಿ ಸಿಕ್ಕಿಕೊಂಡಿದೆ.
ಕಾರಿನಲ್ಲಿ ನಾಲ್ವರು ಯುವಕರು ಪ್ರಯಾಣಿಸುತ್ತಿದ್ದರು ಅಪಘಾತದಲ್ಲಿ ಮೃತಪಟ್ಟವರನ್ನು ಪ್ರವೀಣ ಶೇಡಬಾಳ (22) ಚಾಲಕ, ಈಶ್ವರ್ ವಿಶ್ವನಾಥ ಕುಂಬಾರ (17), ಗಣೇಶ ಅಳ್ಳಿಮಟ್ಟಿ (20), ಪ್ರಜ್ವಲ್ ಶೇಡಬಾಳ (17) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರು ಸಿದ್ದಾಪುರದಿಂದ ಶಿರೋಳ ಕಾಡಸಿದ್ದೇಶ್ವರ ಜಾತ್ರೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮುಂಭಾಗದಲ್ಲಿ ಕುಳಿತಿದ್ದ ಇಬ್ಬರನ್ನು ರಕ್ಷಣೆ ಮಾಡಿದರೂ ಗಂಭೀರ ಗಾಯಗಳಿಂದ ಬಳಿಕ ಅವರೂ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅವರು ಕೂಡ ನಂತರ ಮೃತಪಟ್ಟಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಸಂಚಾರ ಸಾಮಾನ್ಯಗೊಂಡಿದ್ದು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

