ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಿಂದ ಶಾಲಾ ಮಕ್ಕಳಿಗೆ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತೊಂದು ಭಾಗ್ಯ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆ ಉಚಿತ ನೋಟ್ ಬುಕ್ ಕೂಡಾ ಸಿಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಶೇ 90% ಬಡ ಮಕ್ಕಳು ಓದುತ್ತಿದ್ದಾರೆ.ಇದರಲ್ಲಿ ಪದವಿ ಪೂರ್ವ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು ಸಿಗದ ಕಾರಣ ಇಷ್ಟು ವರ್ಷ ನೋಟ್ ಬುಕ್ ಜೊತೆಗೆ ಪಠ್ಯಪುಸ್ತಕಕಗಳನ್ನೂ ಖರೀದಿಸಿ ಬಳಸಬೇಕಿತ್ತು. ಆದರೆ ಇನ್ನು ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 6 ನೋಟ್ ಬುಕ್ಗಳನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ.
ಸರ್ಕಾರದ ಈ ಹೊಸ ನಿರ್ಧಾರದ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈಗಾಗಲೇ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಉಚಿತ ಪಠ್ಯಪುಸ್ತಕಗಳನ್ನ ನೀಡುತ್ತಿದೆ. ರಾಜ್ಯದ ಶಿಕ್ಷಣ ಇಲಾಖೆ ಉಚಿತ ಸಮವಸ್ತ್ರವನ್ನೂ ನೀಡುತ್ತಿದೆ. ಆದರೆ ನೋಟ್ಸ್ ಬುಕ್ ಇಲ್ಲದೆ ತರಗತಿಯಲ್ಲಿ ಶಿಕ್ಷಕರು ಕಲಿಸುವುದನ್ನು ಬರೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಪೋಷಕರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ಸ್ ಬುಕ್ ಸಹ ಸಿಗುತ್ತಿಲ್ಲ. ಇದರಿಂದ ತರಗತಿಯಲ್ಲಿ ಶಿಕ್ಷಕರು ನೀಡುವ ಹೊಮ್ ವರ್ಕ್ ಬರೆಯಲು ಮತ್ತು ತರಗತಿಯ ನೋಟ್ಸ್ ಬರೆದು ಓದಲು ಕಷ್ಟವಾಗಿತ್ತು. ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ 6 ವಿಷಯಗಳಿಗೆ 6 ನೋಟ್ಸ್ ಬುಕ್ ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.

