Wednesday, December 3, 2025

ಅಧಿಕಾರ ಶಾಶ್ವತವಲ್ಲ, ಯಾವಾಗಲಾದರೂ ಒಂದು ದಿನ ಬಿಡಲೇಬೇಕು: ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಮತ್ತೆ ವೇಗ ಸಿಕ್ಕಿರುವ ನಡುವೆಯೇ, ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ ಹೊಸ ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಸ್ಥಾನ ಯಾವೊಬ್ಬ ವ್ಯಕ್ತಿಗೂ ಶಾಶ್ವತವಲ್ಲ ಎಂಬ ವಾಸ್ತವವನ್ನು ರಾಜಕೀಯ ವಲಯ ಮರೆಯಬಾರದು ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗದ ಕುರಿತು ಮಾಡಿದ್ದ ವೈರಾಗ್ಯದ ಮಾತುಗಳು ಸರ್ಕಾರದಲ್ಲೂ, ಪಕ್ಷದ ಒಳಗೂ ವಿಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದ್ದವು.

ಈ ಹಿನ್ನೆಲೆಯಲ್ಲಿ ಮಾತನಾಡಿದ ಜಾರಕಿಹೊಳಿ, ಮುಖ್ಯಮಂತ್ರಿಗಳು ತಕ್ಷಣ ಅಧಿಕಾರ ಬಿಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ ಎಂದರು. ಆದರೆ ಸಮಯ ಬಂದಾಗ ಬಿಡುವುದು ಅನಿವಾರ್ಯ; ಅದು ಮೂರತ್ತು ತಿಂಗಳ ನಂತರವಾಗಬಹುದು ಅಥವಾ ಅದಕ್ಕೂ ಮೊದಲು ನಡೆಯಬಹುದು. ಅಧಿಕಾರ ಎಂದರೆ ಶಾಶ್ವತ ಕುರ್ಚಿಯಲ್ಲ, ಯಾವಾಗಲಾದರೂ ಬಿಡಲೇಬೇಕು ಎಂಬ ರಾಜಕೀಯ ಸತ್ಯವನ್ನು ಅವರು ಪುನರುಚ್ಚರಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳೂ ಹೈಕಮಾಂಡ್ ಕೈಯಲ್ಲೇ ಇರುತ್ತವೆ. ಯಾವ ರೀತಿಯಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಮೇಲ್ಮಟ್ಟದ ನಿರ್ಧಾರಕ್ಕೆ ಒಳಪಟ್ಟ ವಿಚಾರ ಎಂದ ಅವರು, ಪಕ್ಷದಲ್ಲಿ ಉತ್ತಮ ವಾತಾವರಣ ಉಳಿಯಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಎಂದು ಹೇಳಿದರು.

error: Content is protected !!