ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಸಂಸತ್ ಅಧಿವೇಶನದ ಗದ್ದಲದ ಮಧ್ಯೆಯೇ ಕಾಂಗ್ರೆಸ್ ರಾಜ್ಯಸಭೆ ಸಂಸದೆ ರೇಣುಕಾ ಚೌಧರಿ ನಡೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಸಂಸತ್ ಆವರಣಕ್ಕೆ ನಾಯಿ ಕರೆತಂದ ಪ್ರಕರಣದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಷ್ಟೇ ಅಲ್ಲದೆ ನಾಯಿಯಂತೆ “ಬೌ ಬೌ” ಧ್ವನಿ ಮಾಡಿ ಗಮನ ಸೆಳೆದದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ರೇಣುಕಾ ಚೌಧರಿ, ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ, ನನ್ನ ವಿರುದ್ಧ ನಿರ್ಣಯ ತರಬೇಕೆಂದರೆ ಅವರಿಗೆ ಹಕ್ಕಿದೆ ಎಂದು ಸ್ಪಷ್ಟವಾಗಿ ಹೇಳಿದರು. ಈಗಾಗಲೇ ಈ ಘಟನೆಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಸಂಸತ್ತಿನ ಶಿಷ್ಟಾಚಾರಕ್ಕೆ ವಿರುದ್ಧವೆಂದು ಬಿಜೆಪಿ ಆರೋಪಿಸಿದೆ.
ಈ ವಿವಾದದ ಹಿನ್ನೆಲೆಯನ್ನು ವಿವರಿಸಿದ ರೇಣುಕಾ ಚೌಧರಿ, ಸಂಸತ್ತಿಗೆ ಬರುವ ಮಾರ್ಗದಲ್ಲಿ ರಸ್ತೆಯಲ್ಲಿ ಒಂಟಿಯಾಗಿ ಇದ್ದ ನಾಯಿ ಮರಿಯನ್ನು ಕಂಡು ಅದನ್ನು ರಕ್ಷಿಸುವ ಉದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.

