January21, 2026
Wednesday, January 21, 2026
spot_img

ನಂಗಿಷ್ಟ ಇರೋ ವಾಚ್‌ ಹಾಕೋಕೆ ರೈಟ್ಸ್‌ ಇದೆ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನಗೆ ಮತ್ತು ಮುಖ್ಯಮಂತ್ರಿಗಳಿಗಿಬ್ಬರಿಗೂ ನಮಗಿಷ್ಟವಾದ ವಾಚ್‌ ಧರಿಸುವ ಹಕ್ಕು ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಒಂದು ದಿನದ ಹಿಂದಷ್ಟೇ ಸಿಎಂ ಮತ್ತು ತಾವು ದುಬಾರಿ ವಾಚ್‌ ಧರಿಸಿರುವ ಬಗ್ಗೆ ಬಿಜೆಪಿ ಜೆಡಿಎಸ್‌ ಟೀಕೆ ಮಾಡುತ್ತಿದೆ ಎಂದಾಗ, ನಾನು ಈ ನನ್ನ ವಾಚ್‌ನ್ನು 7 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿಸಿದ್ದೆ. ನಾನು ಇದನ್ನು ನನ್ನ ಕ್ರೆಡಿಟ್‌ ಕಾರ್ಡ್ ಮೂಲಕ 24 ಲಕ್ಷ ರೂ. ಕೊಟ್ಟು ಖರೀದಿಸಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್‌ನಲ್ಲೂ ಘೋಷಿಸಿಕೊಂಡಿದ್ದೇನೆ ಎಂದರು.

ನಮ್ಮ ತಂದೆಗೆ ವಾಚ್‌ಗಳೆಂದರೆ ಬಹಳ ಇಷ್ಟ. ಅವರ ಬಳಿ 7 ವಾಚ್‌ಗಳಿದ್ದವು. ಅವರ ನಿಧನದ ನಂತರ ಅದನ್ನು ಯಾರು ಧರಿಸಬೇಕು? ನಾನು ಧರಿಸಬೇಕು, ಇಲ್ಲವೇ ನನ್ನ ತಮ್ಮ ಧರಿಸಬೇಕು ಎಂದರು. ಸಿಎಂಗೆ ಅವರ ಮಗ ಆ ವಾಚ್‌ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿಸಿರಲೂಬಹುದು. ಅಷ್ಟಕ್ಕೂ ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ನಿವಾಸದಲ್ಲಿ ಡಿಸೆಂಬರ್ 2ರಂದು ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇಟ್ ಟು ಸೇಮ್ ವಾಚ್ ಕಟ್ಟಿ ಗಮನಸೆಳೆದಿದ್ದರು. ಕಾರ್ಟಿಯರ್ ಬ್ರ್ಯಾಂಡ್ ವಾಚ್ ಬೆಲೆ 43 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನೇ 24 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ವಾಚ್ ಇದು ಎಂದಿದ್ದಾರೆ.

Must Read