ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈ ಬಾರಿ ಚಳಿಗಾಲವು ವಾಡಿಕೆಗಿಂತ ಹೆಚ್ಚು ಕಠಿಣವಾಗುವ ಸಾಧ್ಯತೆ ಇದೆ. ಸಮುದ್ರ ಮೇಲ್ಮೈ ಉಷ್ಣಾಂಶದಲ್ಲಿ ಸಂಭವಿಸಿದ ಬದಲಾವಣೆಗಳಿಂದ ‘ಲಾ ನೀನಾ’ ಪರಿಸ್ಥಿತಿ ರೂಪುಗೊಂಡಿದ್ದು, ಅದರ ಪ್ರಭಾವದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಹೆಚ್ಚಿನ ಶೀತ ವಾತಾವರಣ ಮುಂದುವರಿಯಲಿದೆ.
ಈ ಬಾರಿ ನವೆಂಬರ್ ಎರಡನೇ ವಾರದಲ್ಲಿಯೇ ಚಳಿ ಆರಂಭವಾಗಿದೆ. ಕಳೆದ ಎರಡು ವರ್ಷಗಳಲ್ಲಿಯೂ ರಾಜ್ಯದಲ್ಲಿ ತೀವ್ರ ಶೀತ ಅನುಭವವಾಗಿದ್ದರೆ, 2024ರಲ್ಲಿ ಮಾತ್ರ ಸಾಮಾನ್ಯ ಚಳಿ ಕಂಡುಬಂದಿತ್ತು. ಆದರೆ ಈ ವರ್ಷ ಮತ್ತೆ ಮೈನಡುಗಿಸುವ ಚಳಿಗೆ ಪರಿಸ್ಥಿತಿ ಸಿದ್ಧವಾಗಿದೆ. ಪ್ರಸ್ತುತ ‘ದಿತ್ವಾ’ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಕುಸಿತಗೊಂಡಿದ್ದು, ಮುಂಜಾನೆ ಮಂಜು, ಇಬ್ಬನಿ ಹಾಗೂ ಮೋಡ ಮುಸುಕಿದ ವಾತಾವರಣ ಕಾಣಿಸುತ್ತಿದೆ.
ಬೆಳಗಾವಿ, ವಿಜಯಪುರ, ಬೀದರ್, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಶೀತ ಅಲೆ ಮಕ್ಕಳಿಗೆ, ಹಿರಿಯರಿಗೆ ಹಾಗೂ ಅನಾರೋಗ್ಯದಿಂದ ಬಳಲುವವರಿಗೆ ಹೆಚ್ಚು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಚಳಿ ಹೆಚ್ಚಾಗಲಿದ್ದು, ರಾತ್ರಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುವ ಸಾಧ್ಯತೆ ಇದೆ.

