ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನೇದಿನೇ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ನಡುವೆ, ಎಚ್ಚರಿಕೆಯಿಂದ ನಡೆದುಕೊಂಡರೆ ಮೋಸಗಾರರನ್ನೇ ಬಲೆಗೆ ಬೀಳಿಸಬಹುದು ಎಂಬುದಕ್ಕೆ ದೆಹಲಿಯ ಯುವಕನೊಬ್ಬ ಸ್ಪಷ್ಟ ಉದಾಹರಣೆಯಾಗಿದ್ದಾನೆ. ಡಿಸೆಂಬರ್ 3ರಂದು ಈ ಘಟನೆ ನಡೆದಿದ್ದು, ಫೇಸ್‌ಬುಕ್ ಮೂಲಕ ಬಂದ ಅಚ್ಚರಿಯ ಕರೆ ಯುವಕನ ಚಾಣಾಕ್ಷ ಪ್ರತಿಕ್ರಿಯೆಯಿಂದ ವಂಚಕನ ಪಾಲಿಗೆ ಪಶ್ಚಾತ್ತಾಪದ ಕ್ಷಣವಾಗಿ ಬದಲಾಗಿದೆ.
ಕರೆ ಮಾಡಿದ ವ್ಯಕ್ತಿ ತಾನು ಸೇನಾ ಅಧಿಕಾರಿ ಎಂದು ಹೇಳಿಕೊಂಡು, ಯುವಕನ ಹೆಸರಿನಲ್ಲಿ ನಕಲಿ ಸರಕುಗಳ ವ್ಯವಹಾರ ನಡೆದಿದೆ ಎಂದು ಬೆದರಿಕೆ ಹಾಕಿದ್ದ. ಪ್ರಕರಣದಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಹಣ ಪಾವತಿಸಬೇಕು ಎಂದು ಹೇಳಿ ಕ್ಯೂಆರ್ ಕೋಡ್ ಕೂಡ ಕಳುಹಿಸಿದ್ದಾನೆ. ಆದರೆ ಯುವಕನಿಗೆ ಈ ಮಾತುಗಳು ಆರಂಭದಲ್ಲೇ ಅನುಮಾನಾಸ್ಪದವಾಗಿ ಕಂಡಿವೆ.
ಮೋಸವೆಂದು ಖಚಿತಪಡಿಸಿಕೊಂಡ ಯುವಕ, ತಕ್ಷಣ ಆತಂಕಗೊಳ್ಳದೆ ChatGPT ಬಳಸಿ ನಕಲಿ ಪಾವತಿ ವೆಬ್‌ಪೇಜ್ ಹಾಗೂ ಟ್ರ್ಯಾಕಿಂಗ್ ಲಿಂಕ್ ಸೃಷ್ಟಿಸಿದ್ದಾನೆ. ‘ನಿಮ್ಮ ಕ್ಯೂಆರ್ ಕೋಡ್ ಸರಿಯಾಗಿದೆಯೇ ಎಂದು ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ಆ ವಂಚಕನಿಗೆ ಕಳುಹಿಸಿದ್ದಾನೆ. ಹಣ ಬರುತ್ತದೆ ಎಂಬ ಆಸೆಯಲ್ಲಿ ಆ ಲಿಂಕ್ ಕ್ಲಿಕ್ ಮಾಡಿದ ಕ್ಷಣದಲ್ಲೇ, ವಂಚಕನಿರುವ ಸ್ಥಳದ ಮಾಹಿತಿ ಮತ್ತು ಸ್ಪಷ್ಟ ಫೋಟೋ ಯುವಕನಿಗೆ ಲಭ್ಯವಾಗಿದೆ.
ಈ ಮಾಹಿತಿಯನ್ನು ಪಡೆದುಕೊಂಡ ಯುವಕ, ಮತ್ತೊಂದು ಸಂದೇಶದಲ್ಲಿ ‘ನಿನ್ನ ಫೋಟೋ ಮತ್ತು ಲೊಕೇಷನ್ ಈಗಾಗಲೇ ಪೊಲೀಸರಿಗೆ ರವಾನಿಸಲಾಗಿದೆ’ ಎಂದು ತಿಳಿಸಿದ್ದಾನೆ. ಈ ಸಂದೇಶ ಬಂದ ತಕ್ಷಣವೇ ಗಾಬರಿಗೊಂಡ ವಂಚಕ, ತಕ್ಷಣ ಕರೆಮಾಡಿ “ಸರ್, ನನಗೆ ತಪ್ಪಾಯಿತು… ದಯವಿಟ್ಟು ಬಿಡಿ, ಇನ್ನು ಮುಂದೆ ಯಾವತ್ತೂ ಇಂತಹ ಕೆಲಸ ಮಾಡಲ್ಲ” ಎಂದು ಅಳಲಿನಲ್ಲಿ ಬೇಡಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾನೆ.
ಈ ಸಂಪೂರ್ಣ ಘಟನೆಯ ವಿಡಿಯೋವನ್ನು ಯುವಕ ನಂತರ Redditನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಐ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಿದರೆ, ಅಪರಾಧಕ್ಕೂ ತಿರುಗೇಟು ನೀಡಬಹುದು ಎಂಬ ಸಂದೇಶ ಈ ಘಟನೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

