ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದ ಮದೀನಾದಿಂದ ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ಅದನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
180 ಪ್ರಯಾಣಿಕರು ಮತ್ತು ಆರು ವಿಮಾನ ಸಿಬ್ಬಂದಿಯನ್ನು ಹೊತ್ತು ಬರುತ್ತಿದ್ದ ವಿಮಾನ ಸಂಖ್ಯೆ 6E58 ಮಧ್ಯಾಹ್ನ 12:30ರ ಸುಮಾರಿಗೆ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಆಕಾಶದಲ್ಲಿದ್ದಾಗಲೇ ವಿಮಾನಯಾನ ಸಂಸ್ಥೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಅಧಿಕಾರಿಗಳು, ಸಮೀಪದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಇಳಿಸುವಂತೆ ಸೂಚಿಸಿದ್ದರು.
ವಿಮಾನ ಲ್ಯಾಂಡ್ ಆದ ಕೂಡಲೇ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸ್ ಪಡೆ ಮತ್ತು ತಜ್ಞರನ್ನೊಳಗೊಂಡ ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿತು. ಸಂಪೂರ್ಣ ತಪಾಸಣೆಯ ನಂತರ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಭದ್ರತಾ ಸಿಬ್ಬಂದಿ ದೃಢಪಡಿಸಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಜೀಜ್ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ 2:10ಕ್ಕೆ ಹೊರಡಬೇಕಿದ್ದ ಈ ವಿಮಾನ, ಸುಮಾರು 3 ಗಂಟೆ ವಿಳಂಬವಾಗಿ ಬೆಳಿಗ್ಗೆ 5:29ಕ್ಕೆ ಟೇಕ್-ಆಫ್ ಆಗಿತ್ತು. ಇದು ಮಧ್ಯಾಹ್ನ 12:30ರ ಹೊತ್ತಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿತ್ತು.
ಇತ್ತೀಚೆಗೆ ಹೈದರಾಬಾದ್ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿಯ ಮಧ್ಯೆ ಈ ಘಟನೆ ನಡೆದಿರುವುದು ಗಮನಾರ್ಹ. ಇದಕ್ಕೂ ಮೊದಲು, ಕೇವಲ ಮೂರು ದಿನಗಳ ಅಂತರದಲ್ಲಿ ಇದು ಇಂಡಿಗೋ ವಿಮಾನಕ್ಕೆ ಎದುರಾದ ಎರಡನೇ ಬಾಂಬ್ ಬೆದರಿಕೆಯಾಗಿದೆ. ಡಿಸೆಂಬರ್ 2 ರಂದು ಕೂಡ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ನಂತರ ಕುವೈತ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿತ್ತು.

