ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯವು ಮಂಡ್ಯದ ವಿಸಿ ಫಾರಂ ಆವರಣದಲ್ಲಿ ಆಯೋಜಿಸಿರುವ ಬೃಹತ್ ‘ಕೃಷಿ ಮೇಳ 2025’ಕ್ಕೆ ಶುಕ್ರವಾರ (ಡಿ.5) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
ಬೆಂಗಳೂರು ಜಿಕೆವಿಕೆ ಮೈದಾನದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಕೃಷಿ ಮೇಳ ಇದಾಗಿದೆ. ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಅವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ.
ಮೂರು ದಿನಗಳ ಈ ಮೇಳದಲ್ಲಿ ಒಟ್ಟು 350 ಸ್ಟಾಲ್‌ಗಳು ಇರಲಿದ್ದು, 5 ಜಿಲ್ಲೆಗಳ ರೈತರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ. ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯವು ಭತ್ತದಲ್ಲಿ 45 ತಳಿಗಳು (3 ಹೈಬ್ರೀಡ್‌ಗಳು), ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು, ಮುಸುಕಿನ ಜೋಳ ಮತ್ತು ಮೇವಿನ ಬೆಳೆಗಳಲ್ಲಿ ನಾಲ್ಕು ತಳಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ತಾಂತ್ರಿಕತೆಗಳನ್ನು ಮತ್ತು ತಳಿಗಳನ್ನು ಅಭಿವೃದ್ಧಿಪಡಿಸಿ ತನ್ನದೇ ಆದ ಪ್ರಾತಿನಿಧ್ಯವನ್ನು ಉಳಿಸಿಕೊಂಡಿದೆ.
ಮುಖ್ಯಮಂತ್ರಿಗಳ ಉದ್ಘಾಟನೆಯ ನಂತರ, ಮೇಳದ ಎರಡನೇ ದಿನದಂದು ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ. ಮೂರನೇ ದಿನದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಠದ ಸ್ವಾಮೀಜಿಗಳು ಉಪಸ್ಥಿತರಿರಲಿದ್ದಾರೆ.
ಕೃಷಿ ಆಧುನಿಕ ತಂತ್ರಜ್ಞಾನಗಳು, ಕೃಷಿ ಅರಣ್ಯ, ಮಾರುಕಟ್ಟೆ ತಂತ್ರಗಳು, ಕೃಷಿ ಹವಾಮಾನ ನಿರ್ವಹಣೆ ಹಾಗೂ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಹೆಚ್ಚಿನ ಒತ್ತು ನೀಡಿ, ರೈತರಿಗೆ ಸಮಗ್ರ ಮಾಹಿತಿ ನೀಡುವ ಗುರಿಯನ್ನು ಮೇಳ ಹೊಂದಿದೆ.

