ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಮಿಸಲಿದ್ದಾರೆ. ಭಾರತಕ್ಕೆ ಹೊರಡುವ ಮೊದಲು ನಡೆಸಿದ ವಿಶ್ವ ವಿಶೇಷ ಸಂದರ್ಶನದಲ್ಲಿ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭ ಮೋದಿ ಹಾಗೂ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಕುರಿತು ರಷ್ಯಾ ಅಧ್ಯಕ್ಷ ಇದೀಗ ಮಾತನಾಡಿದ್ದಾರೆ.
ಸೆಪ್ಟೆಂಬರ್ 1 ರಂದು ಟಿಯಾಂಜಿನ್‌ನಲ್ಲಿ ನಡೆದ ಶೃಂಗಸಭೆಯ ಹೊರತಾಗಿ ಅವರ ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣ ಬೆಳಿಸಿದ್ದರು. ಈ ಕುರಿತು ಮಾತನಾಡಿದ ಪುಟಿನ್ ಮೋದಿಯವರೊಂದಿಗಿನ ಕಾರು ಸವಾರಿ ನನ್ನ ಕಲ್ಪನೆಯಾಗಿತ್ತು. ಅದು ನಮ್ಮ ಸ್ನೇಹದ ಸಂಕೇತವಾಗಿತ್ತು ಎಂದು ಹೇಳಿದ್ದಾರೆ. ಇದು ಪೂರ್ವ ಯೋಜಿತವಾಗಿರಲಿಲ್ಲ. ನಾವು ಹೊರಗೆ ಹೆಜ್ಜೆ ಹಾಕಿದೆವು, ನನ್ನ ಕಾರು ಅಲ್ಲಿತ್ತು. ನಾವಿಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡೋಣ ಎಂದು ನಾನು ಹೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಒಟ್ಟಿಗೆ ತೆರಳಿದೆವು ಎಂದು ಅವರು ಹೇಳಿದರು.
ಚರ್ಚಿಸಲು ಯಾವಾಗಲೂ ಏನಾದರೂ ನಮಗೆ ಇದ್ದೇ ಇರುತ್ತದೆ. ನಾವು ಡ್ರೈವ್ ಉದ್ದಕ್ಕೂ ಮಾತನಾಡಿದೆವು ಎಂದು ಅವರು ಹೇಳಿದರು.
ಮೋದಿ ಸಹ ಈ ಭೇಟಿ ಕುರಿತು ತಮ್ಮ ಎಕ್ಸ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರು.
ವರದಿಗಳ ಪ್ರಕಾರ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿಯವರೊಂದಿಗೆ ಶೃಂಗಸಭೆಯ ಸ್ಥಳದಿಂದ ರಿಟ್ಜ್-ಕಾರ್ಲ್ಟನ್ ಹೋಟೆಲ್‌ಗೆ ಪ್ರಯಾಣಿಸಲು ಬಯಸಿದ್ದರು ಮತ್ತು ಅವರಿಗಾಗಿ 10 ನಿಮಿಷಗಳ ಕಾಲ ಕಾದಿದ್ದರು ಎಂದು ಹೇಳಲಾಗಿತ್ತು. ಹೋಟೆಲ್ ತಲುಪಿದ ನಂತರ ನಾಯಕರು ವಾಹನದೊಳಗೆ 45 ನಿಮಿಷಗಳ ಕಾಲ ತಮ್ಮ ಚರ್ಚೆಗಳನ್ನು ಮುಂದುವರೆಸಿದರು, ನಂತರ ಸುಮಾರು ಒಂದು ಗಂಟೆ ಕಾಲ ನಡೆದ ತಮ್ಮ ಔಪಚಾರಿಕ ದ್ವಿಪಕ್ಷೀಯ ಸಭೆಗೆ ತೆರಳಿದರು ಮತ್ತು ಇಂಧನ, ರಕ್ಷಣೆ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಮಾತನಾಡಿದ್ದರು.
ಇಂದು ಭಾರತಕ್ಕೆ ಬರಲಿರುವ ಪುಟಿನ್ ನೇರವಾಗಿ ಮೋದಿ ನಿವಾಸಕ್ಕೆ ತೆರಳಲಿದ್ದಾರೆ. ಮೋದಿ ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.

