Thursday, December 4, 2025

ಕಮಲ ಪಾಳಯದಲ್ಲಿ ‘ಬಿಗ್ ಫೈಟ್’: ವಿಜಯೇಂದ್ರ ವಿರೋಧಿ ಬಣದ ಟಾರ್ಗೆಟ್ ಈಗ 2026ರ ಚುನಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಸಮರ ಸಾರಿದ್ದ ಪಕ್ಷದ ಭಿನ್ನ ನಾಯಕರ ತಂಡ ಈಗ ತಮ್ಮ ಹೋರಾಟದ ದಿಕ್ಕನ್ನೇ ಬದಲಿಸಿದೆ. ತಕ್ಷಣವೇ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಒತ್ತಡ ಹೇರುವ ಬದಲು, ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಅವರು ಪಕ್ಷವನ್ನು ಮುನ್ನಡೆಸದಂತೆ ನೋಡಿಕೊಳ್ಳುವ ಮಹತ್ವದ ಪ್ರಯತ್ನವನ್ನು ಆರಂಭಿಸಿದೆ.

ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದ ಅತೃಪ್ತರ ತಂಡವು ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ತಂಡವು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಹಾಗೂ ಸಂಸದರಾದ ಬಸವರಾಜ್ ಬೊಮ್ಮಾಯಿ, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಪ್ರಮುಖರನ್ನು ಭೇಟಿ ಮಾಡಿ ಅಸಮಾಧಾನ ತೋಡಿಕೊಂಡಿದೆ.

ವಿಜಯೇಂದ್ರ ಅವರು ಈಗಾಗಲೇ ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದು, ಇನ್ನೊಂದು ವರ್ಷದ ಅವಧಿ ಮಾತ್ರ ಬಾಕಿ ಉಳಿದಿದೆ. ಮುಂಬರುವ ಪಂಚರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಿಸುವ ಸಾಧ್ಯತೆಗಳು ಕಡಿಮೆ ಇವೆ. ಈ ಕಾರಣದಿಂದ, ಕೂಡಲೇ ಬದಲಾವಣೆಗೆ ಒತ್ತಾಯಿಸುವ ಬದಲು, ಮುಂದಿನ ಚುನಾವಣಾ ಸಂದರ್ಭದಲ್ಲಿ ವಿಜಯೇಂದ್ರ ಅವರ ಅವಧಿಯನ್ನು ವಿಸ್ತರಿಸದಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಲು ಬಂಡಾಯ ನಾಯಕರು ನಿರ್ಧರಿಸಿದ್ದಾರೆ. ಚುನಾವಣೆಗೆ ವಿಜಯೇಂದ್ರ ನೇತೃತ್ವ ಬಾರದಂತೆ ತಡೆಯುವುದೇ ಈಗ ರೆಬೆಲ್ಸ್ ತಂಡದ ಮುಖ್ಯ ಗುರಿಯಾಗಿದೆ ಎಂದು ತಿಳಿದು ಬಂದಿದೆ.

error: Content is protected !!