ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ಉದಯನಗರದಲ್ಲಿ ಜೆಸಿಬಿ ಯಂತ್ರಗಳ ಘರ್ಜನೆ ಕೇಳಿಬಂದಿದ್ದು, ಅಕ್ರಮವಾಗಿ ನಿರ್ಮಿಸಲಾಗಿದ್ದ 47 ಮನೆಗಳನ್ನು ನೆಲಸಮಗೊಳಿಸಲಾಗಿದೆ. ಮೂಲ ದಾಖಲಾತಿಗಳನ್ನು ಪರಿಶೀಲಿಸದೆ, ಮೋಸದ ಜಾಲಕ್ಕೆ ಸಿಲುಕಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿದ್ದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಇದೀಗ ಅಕ್ಷರಶಃ ಬೀದಿಗೆ ಬಂದಿದೆ.
ಈ ಜಮೀನು ಮೂಲತಃ ರಾಮರಾವ್ ಸಬನಿಸ್ ಅವರಿಗೆ ಸೇರಿತ್ತು. ಆದರೆ, ಸಿಕಂದರ್ ಎಂಬ ವ್ಯಕ್ತಿ ಈ ನಿವೇಶನ ತನ್ನದೇ ಎಂದು ಸುಳ್ಳು ಹೇಳಿ, ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ. ಸಿಕಂದರ್‌ನ ಮಾತು ನಂಬಿ ನಿವೇಶನ ಪಡೆದ ನಿವಾಸಿಗಳು, ಶ್ರಮವಹಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು.
ಈ ಕುರಿತು ತಿಳಿದ ರಾಮರಾವ್ ಸಬನಿಸ್ ಅವರು ತಮ್ಮ ಜಾಗವನ್ನು ತೆರವುಗೊಳಿಸುವಂತೆ ನಿವಾಸಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಇದಕ್ಕೆ ನಿವಾಸಿಗಳು ಒಪ್ಪದ ಕಾರಣ, ಸಬನಿಸ್ ಅವರು ಕಾನೂನು ಹೋರಾಟ ನಡೆಸಲು ನಿರ್ಧರಿಸಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಂತಿಮವಾಗಿ ರಾಮರಾವ್ ಸಬನಿಸ್ ಅವರ ಪರವಾಗಿ ತೀರ್ಪು ನೀಡಿದೆ.
ಈ ತೀರ್ಪಿನನ್ವಯ, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ, ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದ್ದು, 47 ಕುಟುಂಬಗಳ ಕನಸಿನ ಗೂಡುಗಳು ಕಣ್ಣ ಮುಂದೆಯೇ ನೆಲಸಮವಾಗಿವೆ. ಕಪಟ ಮಾರಾಟಗಾರನಿಂದಾದ ಮೋಸ ಮತ್ತು ಸೂಕ್ತ ದಾಖಲೆ ಪರಿಶೀಲನೆಯ ಕೊರತೆಯು ಈ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ.

