ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(SIR) ಗೆ ನೇಮಕಗೊಂಡಿದ್ದ ಬಿಎಲ್‌ಒಗಳ ಸಾವಿನ ಕುರಿತು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ನಿರ್ದೇಶನ ನೀಡಿದೆ.
ಬಿಎಲ್‌ಒಗಳ ಸುರಕ್ಷತೆ ಮತ್ತು ಕೆಲಸದ ಹೊರೆ ನಿರ್ವಹಣೆ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ . ಅವರ ಕೆಲಸದ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಕೋರ್ಟ್ ನಿರ್ದೇಶಿಸಿದೆ.
ಯಾವುದೇ ಉದ್ಯೋಗಿಗೆ ಕರ್ತವ್ಯದಿಂದ ವಿನಾಯಿತಿ ಪಡೆಯಲು ನಿರ್ದಿಷ್ಟ ಕಾರಣವಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಅಂತಹ ಮನವಿಗಳನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಸ್ತುತ 10,000 ಜನರನ್ನು ಮಾತ್ರ ನಿಯೋಜಿಸಲಾಗಿರುವ ಸ್ಥಳಗಳಲ್ಲಿ 20,000 ಅಥವಾ 30,000 ಸಿಬ್ಬಂದಿಯನ್ನು ನಿಯೋಜಿಸಬಹುದು ಎಂದು ಹೇಳಿದೆ.
ಯಾವುದೇ ಬಿಎಲ್‌ಒ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದರೆ, ರಾಜ್ಯ ಸರ್ಕಾರಗಳು ಎಸ್‌ಐಆರ್ ಕರ್ತವ್ಯಕ್ಕೆ ಪರ್ಯಾಯ ಉದ್ಯೋಗಿಯನ್ನು ನಿಯೋಜಿಸಬಹುದು ಎಂದು ನ್ಯಾಯಾಲಯವು ಹೇಳಿದೆ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ 12 ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಬಿಎಲ್ಒಗಳು ಆತ್ಮಹತ್ಯೆ ಹಾದಿಯನ್ನು ತುಳಿಯುತ್ತಿದ್ದಾರೆ, ಅವರ ಕುಟುಂಬ ಸದಸ್ಯರು ತಮ್ಮ ಹಿರಿಯ ಅಧಿಕಾರಿಗಳಿಂದ ಬಂದ ತೀವ್ರ ಕೆಲಸದ ಒತ್ತಡ ಅವರ ನಿಧನಕ್ಕೆ ಕಾರಣ ಎಂದು ಹೇಳಿದ್ದಾರೆ. ಕಾಂಗ್ರೆಸ್, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ವಿರೋಧ ಪಕ್ಷಗಳು ಕೂಡ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಮತ್ತು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಟೀಕಿಸಿವೆ.

