Thursday, December 4, 2025

16 ವರ್ಷಗಳಿಂದ ಇತ್ಯರ್ಥವಾಗದ ಆ್ಯಸಿಡ್ ದಾಳಿ ಕೇಸ್: ಇದು ನಾಚಿಕೆಗೇಡಿನ ಸಂಗತಿ ಎಂದ ಸುಪ್ರೀಂ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಆ್ಯಸಿಡ್ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ವಿಚಾರಣೆಗಳ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

ಇಂದು ದೆಹಲಿಯಲ್ಲಿ ನಡೆದ ಒಂದು ಪ್ರಕರಣದಲ್ಲಿ ವಿಚಾರಣೆ 16 ವರ್ಷ ವಿಳಂಬವಾಗಿರುವುದನ್ನು ಗಮನಿಸಿದ ಸರ್ವೋಚ್ಛ ನ್ಯಾಯಾಲಯವು ಕಟುವಾಗಿ ಟೀಕಿಸಿದ್ದು, ಇದನ್ನು ರಾಷ್ಟ್ರೀಯ ಅವಮಾನ ಎಂದು ಕರೆದಿದೆ.

ಆ್ಯಸಿಡ್ ದಾಳಿಯಲ್ಲಿ ಬದುಕುಳಿದ ಶಾಹೀನ್ ಮಲಿಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಕೇಂದ್ರ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

2009ರಲ್ಲಿ ದಾಖಲಾಗಿದ್ದ ಮಲಿಕ್ ಅವರ ಪ್ರಕರಣವು ಇನ್ನೂ ನ್ಯಾಯಾಲಯದ ಮುಂದೆ ಇತ್ಯರ್ಥಕ್ಕೆ ಕಾಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಇದು ತುಂಬಾ ನಾಚಿಕೆಗೇಡಿನ ಸಂಗತಿ. ರಾಷ್ಟ್ರ ರಾಜಧಾನಿ ಇದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಯಾರು ಮಾಡುತ್ತಾರೆ? ಇದು ರಾಷ್ಟ್ರೀಯ ಅವಮಾನ ಎಂದು ಪೀಠ ತರಾಟೆಗೆತೆಗೆದುಕೊಂಡಿದೆ.

ಮಲಿಕ್ ಅವರಿಗೆ ತಮ್ಮ ಪಿಐಎಲ್‌ನಲ್ಲಿ ವಿಳಂಬದ ಹಿಂದಿರುವ ಕಾರಣಗಳನ್ನು ವಿವರಿಸಿ ಅರ್ಜಿ ಸಲ್ಲಿಸಲು ಕೇಳಲಾಯಿತು ಹಾಗೂ ನ್ಯಾಯಾಲಯ ಸ್ವಯಂಪ್ರೇರಿತ ಕ್ರಮವನ್ನು ಸಹ ಕೈಗೊಳ್ಳಬಹುದೆಂದು ಭರವಸೆ ನೀಡಿದರು. ದೇಶಾದ್ಯಂತ ಬಾಕಿ ಇರುವ ಇದೇ ರೀತಿಯ ಪ್ರಕರಣಗಳ ವಿವರಗಳನ್ನು ಒದಗಿಸುವಂತೆ ಪೀಠವು ಎಲ್ಲ ಹೈಕೋರ್ಟ್‌ಗಳ ನೋಂದಾವಣೆಗಳಿಗೆ ಸೂಚನೆ ನೀಡಿತು.

ವಿಚಾರಣೆಯ ಸಮಯದಲ್ಲಿ, ಆ್ಯಸಿಡ್ ದಾಳಿಯಿಂದ ಬದುಕುಳಿದವರು ಎದುರಿಸುತ್ತಿರುವ ತೀವ್ರ ಸವಾಲುಗಳನ್ನು ಮಲಿಕ್ ವಿವರಿಸಿದರು. ಅನೇಕರು ಶಾಶ್ವತ ಗಾಯಗಳೊಂದಿಗೆ ಬದುಕುತ್ತಿದ್ದಾರೆ. ಬದುಕುಳಿದವರು ವಿಶೇಷ ಚೇತನರು ಎಂದು ಗುರುತಿಸಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಇದರಿಂದ ವಿಶೇಷ ಚೇತನರಿಗೆ ಇರುವ ಸವಲತ್ತುಗಳನ್ನು ಅವರು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕೋರ್ಟ್ ಈ ಬೇಡಿಕೆಯ ಕುರಿತು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿ, ಈ ವಿಷಯವನ್ನು ಸರಿಯಾದ ಗಂಭೀರತೆಯೊಂದಿಗೆ ತೆಗೆದುಕೊಳ್ಳಲಾಗುವುದು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದರು.

error: Content is protected !!