ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಗೆ ಬಂದಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಪುಟಿನ್ ಅವರನ್ನು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದು ಹಸ್ತಲಾಘವ ಮತ್ತು ಅಪ್ಪುಗೆ ಮೂಲಕ ಪುಟಿನ್ ಅವರನ್ನು ಸ್ವಾಗತಿಸಿದ ಮೋದಿ ಬಳಿಕ ಏರ್ಪೋರ್ಟ್ನಿಂದ ಹೊರಟರು. ಈ ವೇಳೆ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು.
ಕಪ್ಪು ಸೂಟ್ ಮತ್ತು ಬೂಟುಗಳನ್ನ ಧರಿಸಿದ್ದ ಪುಟಿನ್, ವಿಮಾನದಿಂದ ಇಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಅಚ್ಚರಿಯಾದರು.
ರಷ್ಯಾದ ಅಧ್ಯಕ್ಷರು ವಿಮಾನದಿಂದ ಇಳಿದ ತಕ್ಷಣ, ಪ್ರಧಾನಿ ಮೋದಿ ಅವರಿಗೆ ಹೃತ್ಪೂರ್ವಕವಾಗಿ ಕೈಕುಲುಕಿ ನಂತರ ಅವರನ್ನ ಅಪ್ಪಿಕೊಂಡರು. ಶಿಷ್ಟಾಚಾರವನ್ನು ಮುರಿದು ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದರು. ಪ್ರಧಾನಿ ಮೋದಿ ಅವರ ಈ ನಡೆ ರಷ್ಯಾವನ್ನು ಅಚ್ಚರಿಗೊಳಿಸಿತು.
ರಷ್ಯಾದ ಅಧ್ಯಕ್ಷೀಯ ಅರಮನೆಯಾದ ಕ್ರೆಮ್ಲಿನ್ ಹೇಳಿಕೆ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಹೇಳಿದೆ.
ರಷ್ಯಾದ ಅಧ್ಯಕ್ಷರ ಐತಿಹಾಸಿಕ ಭಾರತ ಭೇಟಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಇದು ಎರಡು ದೇಶಗಳ ನಡುವಿನ ಬೆಳೆಯುತ್ತಿರುವ ಮತ್ತು ಕಾರ್ಯತಂತ್ರದ ಸ್ನೇಹದ ಸಂಕೇತವಾಗಿದೆ ಎಂದು ಹೇಳಿದರು. ರಷ್ಯಾ ಮತ್ತು ಭಾರತವು ಅತ್ಯಂತ ಸೂಕ್ಷ್ಮ ಕ್ಷೇತ್ರಗಳಲ್ಲಿ ಸಂಬಂಧವನ್ನು ಹೊಂದಿವೆ ಎಂದು ಹೇಳಿದರು.

