ಒಂದು ವಿಚಾರವನ್ನು ಒಂದೆರಡು ಬಾರಿ ಯೋಚಿಸುವುದು ಸಹಜ, ಆದರೆ ಅದೇ ವಿಚಾರವನ್ನು ಮತ್ತೆ ಮತ್ತೆ ತಲೆಕೆಡಿಸಿಕೊಳ್ಳುವ ಮಟ್ಟಿಗೆ ಯೋಚಿಸುವ ಅಭ್ಯಾಸವೇ “ಓವರ್‌ಥಿಂಕಿಂಗ್”. ಸರಳವಾದ ಸಮಸ್ಯೆಯನ್ನೂ ದೊಡ್ಡದಾಗಿಸಿ, ಇನ್ನೂ ಆಗದೇ ಇರುವ ಘಟನೆಗಳ ಬಗ್ಗೆ ಭಯಪಡುವ ಈ ಮನಸ್ಥಿತಿ ನಿಧಾನವಾಗಿ ನಮ್ಮ ಮಾನಸಿಕ ಶಾಂತಿಯನ್ನು ಕದ್ದೊಯ್ಯುತ್ತದೆ. ಹೊರಗೆ ನಗುತ್ತಾ ಇರ್ತೀವಿ, ಒಳಗೆ ಮಾತ್ರ ಮನಸ್ಸು ಎಂದೂ ವಿಶ್ರಾಂತಿ ಪಡೆಯುವುದೇ ಇಲ್ಲ. ಅದೇ ಓವರ್‌ಥಿಂಕಿಂಗ್‌ನ ದೊಡ್ಡ ಅಪಾಯ.
- ಮನಸ್ಸಿನ ದಣಿವು: ಅತಿಯಾಗಿ ಯೋಚಿಸುವುದರಿಂದ ಮೆದುಳು ಯಾವಾಗಲೂ ಕಾರ್ಯನಿರತವಾಗಿರುತ್ತದೆ. ಇದರಿಂದ ದೈಹಿಕ ಕೆಲಸವೇನೂ ಮಾಡದಿದ್ದರೂ ಒಳಗಡೆ ದೊಡ್ಡ ದಣಿವು ಅನುಭವವಾಗುತ್ತದೆ.
- ಆತಂಕ ಮತ್ತು ಭಯ: ಇನ್ನೂ ಆಗದೇ ಇರುವ ಸಂಗತಿಗಳ ಬಗ್ಗೆ ನೆಗೆಟಿವ್ ನಿರೀಕ್ಷೆಗಳು ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸುತ್ತವೆ. ಸಣ್ಣ ವಿಚಾರವೂ ದೊಡ್ಡ ಭಯವಾಗಿ ಕಾಣಲು ಆರಂಭಿಸುತ್ತದೆ.
- ನಿದ್ರಾಭಂಗ: ರಾತ್ರಿ ಮಲಗುವಾಗಲೂ ವಿಚಾರಗಳು ತಲೆ ಸುತ್ತುತ್ತಿರುತ್ತವೆ. ಇದರ ಪರಿಣಾಮವಾಗಿ ನಿದ್ರೆ ಸರಿಯಾಗಿ ಬಾರದು, ಮರುದಿನ ಮನಸ್ಸು ಇನ್ನಷ್ಟು ಅಶಾಂತವಾಗುತ್ತದೆ.
- ತಪ್ಪು ನಿರ್ಧಾರಗಳು: ಅತಿಯಾದ ವಿಶ್ಲೇಷಣೆ ಸರಿಯಾದ ನಿರ್ಧಾರಗಳನ್ನು ಕೂಡ ವಿಳಂಬ ಮಾಡುತ್ತದೆ. ಕೆಲವೊಮ್ಮೆ ಸುಲಭವಾದ ಆಯ್ಕೆಯನ್ನೂ ಕಷ್ಟಕರವಾಗಿಸುತ್ತದೆ.
- ಮಾನಸಿಕ ಸಮತೋಲನ ಕಳೆದುಕೊಳ್ಳುವುದು: ನಿರಂತರ ಓವರ್‌ಥಿಂಕಿಂಗ್ ಭಾವನಾತ್ಮಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಖುಷಿ, ತೃಪ್ತಿ, ಶಾಂತಿ ಎಲ್ಲವು ನಿಧಾನವಾಗಿ ಕಡಿಮೆಯಾಗುತ್ತದೆ.

