ಭಾರತೀಯ ಅಡುಗೆಯ ರುಚಿಗೆ ಜೀವ ತುಂಬುವ ತರಕಾರಿಗಳಲ್ಲಿ ಟೊಮ್ಯಾಟೊ ಮೊದಲ ಸಾಲಿನಲ್ಲಿದೆ. ಸಾಂಬಾರ್, ಪಲ್ಯ, ಗ್ರೇವಿ ಯಾವ ಊಟ ಮಾಡಿದರೂ ಟೊಮ್ಯಾಟೊ ಇದ್ದರೆ ರುಚಿ ಮತ್ತಿಷ್ಟು ಹೆಚ್ಚುತ್ತದೆ. ಆದರೆ ಈ ತರಕಾರಿ ಬೇಗನೆ ಮೃದುವಾಗಿ ಹಾಳಾಗುವುದು ಸಾಮಾನ್ಯ. ಮಾರುಕಟ್ಟೆಯಿಂದ ತಂದು ಕೆಲವು ದಿನಗಳಲ್ಲೇ ಕೆಡುವ ಟೊಮ್ಯಾಟೊಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಕೆಲವು ಸರಿಯಾದ ಸಂಗ್ರಹ ವಿಧಾನ ಇಲ್ಲಿದೆ.
- ತಂದು ತಕ್ಷಣ ತೊಳೆಯಬೇಡಿ: ಟೊಮ್ಯಾಟೊಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ತೊಳೆಯಬೇಡಿ. ತೊಳೆಯಬೇಕಾದರೆ ಚೆನ್ನಾಗಿ ಒಣಗಿಸಿ ನಂತರ ಫ್ರಿಡ್ಜ್ ನಲ್ಲಿ ಇಡಿ; ತೇವಾಂಶವೇ ಹಾಳಾಗುವ ಪ್ರಮುಖ ಕಾರಣ.
- ಉಳಿದ ತರಕಾರಿ–ಹಣ್ಣುಗಳಿಂದ ದೂರ ಇಡಿ: ಇತರ ತರಕಾರಿಗಳು ಮತ್ತು ಹಣ್ಣುಗಳಿಂದ ಹೊರಬರುವ ಗ್ಯಾಸ್‌ಗಳು ಟೊಮ್ಯಾಟೊಗಳನ್ನು ಬೇಗ ಮೃದುಗೊಳಿಸುತ್ತವೆ. ಬುಟ್ಟಿ ಅಥವಾ ಬೇರೆ ಡಬ್ಬಿಯಲ್ಲಿ ಇಡುವುದು ಉತ್ತಮ.
- ಪೇಪರ್‌ನಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಇಡಿ: ಪ್ರತಿ ಟೊಮ್ಯಾಟೊವನ್ನೂ ಪೇಪರ್‌ನಲ್ಲಿ ಸುತ್ತಿದರೆ ತೇವಾಂಶ ಉಳಿಯುವುದಿಲ್ಲ ಹಾಗೂ ಟೊಮ್ಯಾಟೊ ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಉಳಿಯುತ್ತದೆ.
- ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ: ಮಾರುಕಟ್ಟೆಯಿಂದ ತಂದು ಅರಿಶಿನ ನೀರಿನಲ್ಲಿ ಒಂದು ಬಾರಿ ತೊಳೆದು ಒಣಗಿಸಿದರೆ ಬ್ಯಾಕ್ಟೀರಿಯಾ ನಾಶವಾಗುತ್ತದೆ,ಟೊಮ್ಯಾಟೊ ತಾಜಾತನ ಉಳಿಯುತ್ತದೆ.
- ಹಣ್ಣಾದ ಟೊಮ್ಯಾಟೊ ಮೊದಲು ಬಳಸಿ: ಬಹಳ ಹಣ್ಣಾದ ಟೊಮ್ಯಾಟೊಗಳನ್ನು ಮೊದಲೇ ಬಳಸಿ ಅಥವಾ ಪ್ಯೂರಿ ಮಾಡಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರೆ ವ್ಯರ್ಥವಾಗುವುದಿಲ್ಲ.
- ಕಾಂಡದ ಭಾಗವನ್ನು ಕೆಳಗೆ ಇಡಿ: ಈ ವಿಧಾನ ಟೊಮ್ಯಾಟೊಗಳಲ್ಲಿರುವ ನೈಸರ್ಗಿಕ ತೇವ ಹೊರಬಾರದಂತೆ ತಡೆದು ಅವುಗಳನ್ನು ಹೆಚ್ಚು ದಿನ ಫ್ರೆಶ್ ಆಗಿರಿಸುತ್ತದೆ.

