January20, 2026
Tuesday, January 20, 2026
spot_img

ಅಂದು ನಿಷೇಧಿಸಲು ಮುಂದಾಗಿದ್ದ ಭಗವದ್ಗೀತೆ ಇಂದು ಪುಟಿನ್ ಕೈಯಲ್ಲಿ: ಕಾಲ ಬದಲಾಗುತ್ತೆ ಅನ್ನೋದು ಇದಕ್ಕೆ ಅಲ್ವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ನವದೆಹಲಿಯಲ್ಲಿ ನಡೆದ ಶಿಷ್ಟಾಚಾರಿಕ ಭೇಟಿಯಲ್ಲಿ ಭಗವದ್ಗೀತೆಯೊಂದು ಪ್ರಮುಖ ಸಾಂಕೇತಿಕ ಕ್ಷಣವಾಗಿ ಹೊರಹೊಮ್ಮಿದೆ.

ಪ್ರಧಾನಮಂತ್ರಿ ಮೋದಿ ತಮ್ಮ ಅಧಿಕೃತ ನಿವಾಸವಾದ 7 ಲೋಕ ಕಲ್ಯಾಣ ಮಾರ್ಗದಲ್ಲಿ ಪುಟಿನ್ ಅವರನ್ನು ಸ್ವಾಗತಿಸಿ, ರಷ್ಯನ್ ಭಾಷೆಗೆ ಅನುವಾದಿಸಿದ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ 2011ರಲ್ಲಿ ರಷ್ಯಾದ ಟಾಮ್ಸ್ಕ್ ನ್ಯಾಯಾಲಯದಲ್ಲಿ ಇದೇ ಪವಿತ್ರ ಗ್ರಂಥವನ್ನು ನಿಷೇಧಿಸಲು ಯತ್ನಿಸಿದ್ದ ಘಟನೆ ಮತ್ತೆ ನೆನಪಿಗೆ ಬಂದಿದೆ.

ಅಂದು ಇಸ್ಕಾನ್ ಪ್ರಕಟಿಸಿದ “ಭಗವದ್ಗೀತೆ” ಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಹಣೆಪಟ್ಟಿ ಕಟ್ಟಿ ನಿಷೇಧಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಪ್ರಕರಣ ತೀವ್ರಗೊಂಡು ರಷ್ಯಾದ ವಿದೇಶಾಂಗ ಸಚಿವಾಲಯವೂ ತನಿಖೆಯಲ್ಲಿ ಭಾಗಿಯಾಗಿದ್ದರೆ, ಭಾರತದಲ್ಲಿ ಸಂಸತ್ತಿನಿಂದ ಬೀದಿವರೆಗೂ ವ್ಯಾಪಕ ಪ್ರತಿಭಟನೆಗಳು ನಡೆದವು. ಡಿಸೆಂಬರ್ 28, 2011ರಲ್ಲಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿ ಗೀತೆಗೆ ಯಾವುದೇ ಆಪಾದನೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಹದಿನೈದು ವರ್ಷಗಳ ಬಳಿಕದ ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಭಾರತ–ರಷ್ಯಾ ಸಂಬಂಧಗಳು ಹೊಸ ಹಂತಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಪುಟಿನ್ ಗೀತೆಯ ಪ್ರತಿಯನ್ನು ಗೌರವದಿಂದ ಸ್ವೀಕರಿಸಿದ ದೃಶ್ಯ ಎರಡೂ ರಾಷ್ಟ್ರಗಳ ಸಾಂಸ್ಕೃತಿಕ–ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ. 2011ರ ವಿವಾದದಿಂದ 2025ರ ಸ್ನೇಹಪೂರ್ಣ ವಿನಿಮಯದವರೆಗೆ ನಡೆದ ಈ ಬದಲಾವಣೆ 2 ದೇಶಗಳ ಸಂಬಂಧಗಳ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತದೆ.

Must Read